ಎದೆಮಟ್ಟಕ್ಕೆ ನೀರಿದ್ರೂ ಅಪಾಯ ಲೆಕ್ಕಿಸದೇ ವಿದ್ಯುತ್ ತಂತಿ ಸರಿಪಡಿಸಿದ ಲೈನ್‍ಮ್ಯಾನ್

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ನಡುವೆ ಲೈನ್ ಮ್ಯಾನ್ ಒಬ್ಬರ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.

ಮಂಗಳೂರು ಹೊರವಲಯದ ದೇರಳಕಟ್ಟೆಯಲ್ಲಿ ಭಾರೀ ಮಳೆಗೆ ವಿದ್ಯುತ್ ಕೈಕೊಟ್ಟು 40 ರಷ್ಟು ಮನೆಗಳಿಗೆ ಕರೆಂಟ್ ಇಲ್ಲದಾಗಿತ್ತು. ಈ ವಿಚಾರವನ್ನು ನಿವಾಸಿಗಳು ಸ್ಥಳೀಯ ಲೈನ್ ಮ್ಯಾನ್ ಒಬ್ಬರ ಗಮನಕ್ಕೆ ತಂದಿದ್ದಾರೆ. ಅಂತೆಯೇ ಸ್ಥಳಕ್ಕೆ ದೌಡಾಯಿಸಿದ ಲೈನ್ ಮ್ಯಾನ್ ಸುರಿಯುತ್ತಿದ್ದ ಜಡಿಮಳೆಯಲ್ಲೇ ತನ್ನ ಕೆಲಸ ಮುಗಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಭಾರೀ ಮಳೆಯಿಂದ ಎಲ್ಲಿ ನೋಡಿದರೂ ನೀರಾಗಿತ್ತು. ವಿದ್ಯುತ್ ಕಂಬದ ಸುತ್ತ ಎದೆಮಟ್ಟಕ್ಕೆ ನೀರು ನಿಂತಿದ್ದರಿಂದ ಭಾರೀ ಅಪಾಯ ಕಾದಿತ್ತು. ಹೀಗಿದ್ದರೂ ಲೆಕ್ಕಿಸದೇ ಲೈನ್ ಮ್ಯಾನ್ ಅವರು ನೆರೆ ನೀರಿನಲ್ಲಿ ಮುಳುಗೆದ್ದು ಹೋಗಿ ವಿದ್ಯುತ್ ತಂತಿ ಸರಿಪಡಿಸಿದ್ದಾರೆ. ಸದ್ಯ ಮೆಸ್ಕಾಂ ಸಿಬಂದಿಯ ಕಾರ್ಯ ತತ್ಪರತೆಗೆ ಸಾರ್ವಜನಿಕರು ಶಹಬ್ಬಾಸ್ ಎಂದಿದ್ದಾರೆ.