ಮಾಟ-ಮೋಡಿ ಹೆಸರಲ್ಲಿ ಮೋಸ ಮಾಡುತ್ತಿದ್ದ ಮಂತ್ರವಾದಿಯ ಕಳ್ಳಾಟ ಬಯಲು ಮಾಡಿದ ಯುವಕ,

ಕಾರವಾರ: ಮಾಟ-ಮಂತ್ರದ ಹೆಸರಿನಲ್ಲಿ ಜನರನ್ನು ಮೋಸ ಮಾಡುತ್ತಿದ್ದ ಮಂತ್ರವಾದಿಗೆ ಯುವಕನೊಬ್ಬ ಸರ್ಯಾಗಿ ಜಾಡಿಸಿ ಆತನ ಕಳ್ಳಾಟ ಬಯಲು ಮಾಡಿ ವಿಡಿಯೋ ಮಾಡಿರುವ ಘಟನೆ ನಡೆದಿದೆ. ಕುಮಟಾ ಮೂಲದ ಮಂತ್ರವಾದಿಗೆ ಆಮದಳ್ಳಿಯ ಯುವಕ ಚೆನ್ನಾಗಿ ಕ್ಲಾಸ್ ತೆಗೆದುಕೊಂಡು ಮತ್ತೆ ಈ ರೀತಿ ಮೋಸ ಮಾಡದಂತೆ ಎಚ್ಚರಿಕೆ ಕೊಟ್ಟು ಕಳಿಸಿದ್ದಾನೆ.

ಸುಮಾರು 20 ಮನೆಗಳಿಗೆ ಮಾಟ, ಮೋಡಿ ತೆಗೆಯುವುದಾಗಿ ತಲಾ 20 ರಿಂದ 30 ಸಾವಿರ ರೂ. ಪೀಕಿದ್ದ ಮಂತ್ರವಾದಿಯ ಮೋಸವನ್ನು ಆಮದಳ್ಳಿಯ ಮಂಜುನಾಥ್ ಕರಿಯಗೌಡ ಎಂಬ ಯುವಕ ಬಯಲು ಮಾಡಿದ್ದಾನೆ. ಮನೆಯ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದ ಮಂಜುನಾಥ್ ಕರಿಯಗೌಡ ಹಾಗೂ ಅವರ ಅಕ್ಕನ ಕುಟುಂಬ ತೋಡೂರಿನ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿತ್ತು. ಆ ವ್ಯಕ್ತಿ ನಿಮ್ಮ ಮನೆಗೆ ಮಾಟ ಮಾಡಿದ್ದಾರೆ, ಅದನ್ನು ತೆಗೆಯಿಸಬೇಕು ಎಂದು ಹೇಳಿದ್ದರು. ಅಲ್ಲದೇ, ಕುಮಟಾದ ಮಂತ್ರವಾದಿಯೊಬ್ಬನನ್ನು ಸಂಪರ್ಕಿಸಲು ಸೂಚಿಸಿದ್ದರು. ವ್ಯಕ್ತಿಯ ಸೂಚನೆಯಂತೆ ಮನೆಗೆ ಒಳ್ಳೆಯದಾಗಲೆಂದು ಮಂತ್ರವಾದಿಯನ್ನು ಮನೆಗೆ ಕರೆಸಲಾಯಿತು.

ಕಳೆದ ಸೋಮವಾರ ಮಧ್ಯಾಹ್ನ 12 ಗಂಟೆಗೆ ಮಂಜುನಾಥ್ ಮನೆಗೆ ಬಂದ ಕುಮಟಾ ಮೂಲದ ಮಂತ್ರವಾದಿ ಮಾಟ-ಮಂತ್ರ ಎಂದು ಮೋಸದ ಜಾಲ ಬೀಸಿದ್ದ. ತಾನೇ ಬಟ್ಟೆಯಲ್ಲಿ ತಗಡು ತುಂಡನ್ನು ಸುತ್ತಿ ತಂದಿದ್ದಲ್ಲದೇ, ಮನೆಯವರಿಂದ 12,000ರೂ. ಹಣವನ್ನು ಫೀಸ್ ರೂಪದಲ್ಲಿ ಪಡೆದಿದ್ದ. ಮನೆಯವರ ಎದುರಲ್ಲಿ ಕಾಲ ಬೆರಳಿನಲ್ಲಿ ಮಣ್ಣು ಒತ್ತಿ ಮೋಡಿ ತೆಗೆಯುವ ನಾಟಕವಾಡಿದ್ದ. ತನ್ನ ಕೈಯಲ್ಲಿದ್ದ ಬಟ್ಟೆಯಲ್ಲಿ ಸುತ್ತಿದ್ದ ತಗಡನ್ನು ಮೆಲ್ಲಗೆ ನೆಲಕ್ಕೆ ಹಾಕಿ ಮಣ್ಣಿನಡಿಯಿಂದ ತೆಗೆಯುವ ರೀತಿ ಡ್ರಾಮಾ ಮಾಡಿದ್ದ.

ಮನೆಯವರನ್ನೆಲ್ಲಾ ಒಂದೊಂದು ಕೆಲಸಕ್ಕೆ ಕಳುಹಿಸಿ ಯಾರೂ ಇಲ್ಲದಾಗ ತಗಡನ್ನು ಮೆಲ್ಲಗೆ ಕಾಲಡಿಗೆ ಹಾಕಿ ಮೋಡಿ ತೆಗೆದಿರುವ ಹಾಗೆ ನಟಿಸಿ ಅಲ್ಲಿಂದ ಹಣ ಪಡೆದು ನೇರವಾಗಿ ಬಿಣಗಾದಲ್ಲಿರುವ ಮಂಜುನಾಥ್ ಅವರ ಅಕ್ಕ ನಾಗವೇಣಿ ಎಂಬುವರ ಮನೆಗೆ ಮಧ್ಯಾಹ್ನ 3 ಗಂಟೆಗೆ ತೆರಳಿದ್ದ. ಅಲ್ಲೂ ಕೂಡಾ ಅದೇ‌ ರೀತಿಯ ನಾಟಕವಾಡಲು ಪ್ರಾರಂಭಿಸಿದ್ದ. ಮಂತ್ರವಾದಿಯ ನಾಟಕದ ಬಗ್ಗೆ ಸಂಶಯ ಬಂದು ಮಂಜುನಾಥ್ ನೇರವಾಗಿ ತನ್ನ ಅಕ್ಕ ನಾಗವೇಣಿಯ ಮನೆಗೆ ತೆರಳಿದ್ದರು. ಮೋಡಿ ತೆಗೆಯುವ ನಾಟಕವಾಡ್ತಾ ಮನೆಯವರಿಗೆಲ್ಲಾ ಒಂದೊಂದು ಕೆಲಸ ಹೇಳಿ ಕಳಿಸಿದ್ದ ಮಂತ್ರವಾದಿಯ ಬಗ್ಗೆ ಮಂಜುನಾಥ್​ಗೆ ಇನ್ನಷ್ಟು ಸಂಶಯ ಹೆಚ್ಚಾಗಿತ್ತು. ಇದನ್ನು ಗಮನಿಸಿದ ಮಂತ್ರವಾದಿ ಮಂಜುನಾಥ್ ಕರಿಯಗೌಡ ಅವರಿಗೆ ಹಾರೆಯನ್ನು ತರಲು ಹೇಳಿ ಕಳಿಸಿದ. ಹಾರೆ‌ ತಂದು ಮೆಲ್ಲ ಕದ್ದು ನೋಡಿದಾಗ ಕೈಯಲ್ಲಿದ್ದ ತಗಡನ್ನು ಮಂತ್ರವಾದಿ ಕಾಲಡಿ ಹಾಕುವುದನ್ನು ಮಂಜುನಾಥ್ ನೋಡಿದ್ದಾರೆ.

ಆಗ ಕೂಡಲೇ ಮಂತ್ರವಾದಿಯನ್ನು ರೆಡ್ ಹ್ಯಾಂಡ್ ಹಿಡಿದು ಸರಿಯಾಗಿ ಕ್ಲಾಸ್ ತೆಗೆದುಕೊಂಡ ಮಂಜುನಾಥ್, ತಾನು ನೀಡಿದ್ದ 12,000ರೂ. ವಾಪಾಸ್ ಪಡೆದು ಮಂತ್ರವಾದಿಯನ್ನು ಮನೆಯಿಂದ ಓಡಿಸಿ ವಿಡಿಯೋ ಮಾಡಿದ್ದಾರೆ. ಮಂತ್ರವಾದಿಯ ಕೃತ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ವಾಟ್ಸಪ್ ಮೂಲಕ‌ ಮಂಜುನಾಥ್ ಶೇರ್ ಮಾಡಿದ್ದಾರೆ. ಇದನ್ನು ನೋಡಿ ಆಮದಳ್ಳಿ ಹಾಗೂ ಚಿತ್ತಾಕುಲದ ಜನರು ತಮಗೂ ಮೋಸವಾಗಿರುವುದಾಗಿ ಮಂಜುನಾಥ್​ ಅವರನ್ನು ಸಂಪರ್ಕಿಸಿ ಆಕ್ರೋಶ ಹೊರ ಹಾಕಿದ್ದಾರೆ.