ಬೆಳ್ಳಂಬೆಳಗ್ಗೆ ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ.! ಲಾರಿಯಲ್ಲಿ ಏನು ಸಾಗಿಸ್ತಾ ಇದ್ರು ಗೊತ್ತಾ.?

ಕಾರವಾರ: ಬೆಳ್ಳಂಬೆಳಗ್ಗೆ ಅಬಕಾರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸ್ಪಿರಿಟ್ ಸಾಗಿಸುತ್ತಿದ್ದ ಲಾರಿ ಸೇರಿದಂತೆ ಒಟ್ಟೂ 21.75 ಲಕ್ಷ ರೂ. ಗಳ ಸ್ವತ್ತನ್ನು ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ವಶಕ್ಕೆ ಪಡೆದು ಇಬ್ಬರನ್ನ ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಶ್ರೀನಾಥ ಪೆರಿಯನ್ನನ್ ಹಾಗೂ ಸೆಂಥಲಕುಮಾರ ಅರುಮುಗಮ್ ಬಂಧಿತ
ಆರೋಪಿಗಳು. ಇವರು ಗೋವಾ ಕಡೆಯಿಂದ ಮಾಜಾಳಿ ಗಡಿ ಮೂಲಕ ಕರ್ನಾಟಕದತ್ತ ಹಾರ್ಪಿಕ್ ಕಾರ್ಟೂನ್ ಬಾಕ್ಸ್ನಲ್ಲಿ ಅಕ್ರಮ ಮದ್ಯ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕ ಬಸವರಾಜ, ಕಾರವಾರ ವಲಯದ ಅಬಕಾರಿ ನಿರೀಕ್ಷಕ ದಯಾನಂದ ಮತ್ತು ಅಬಕಾರಿ ತನಿಖಾ ಠಾಣೆ ಅಧಿಕಾರಿಗಳು ವಾಹನವನ್ನು ತಡೆದು ತಪಾಸಣೆ ನಡೆಸಿದ್ದಾರೆ.

ಈ ವೇಳೆ ವಾಹನದಲ್ಲಿ 35 ಲೀಟರ್ ನ 43 ಕ್ಯಾನ್‌ಗಳಲ್ಲಿ ಒಟ್ಟೂ 1,505 ಲೀ ಸ್ಪಿರೀಟ್‌ನ್ನು ಹಾರ್ಪಿಕ್ ಬಾಕ್ಸ್ಗಳ ಜೊತೆಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಬಳಿಕ ಅಬಕಾರಿ ಅಧಿಕಾರಿಗಳು 90,300 ರೂ. ಮೌಲ್ಯದ ಸ್ಪಿರಿಟ್, 8,85,305 ರೂ. ಮೌಲ್ಯದ ಹಾರ್ಪಿಕ್ ಕಾರ್ಟೂನ್ ಬಾಕ್ಸ್ ಗಳು ಹಾಗೂ ಸುಮಾರು 12 ಲಕ್ಷ ರೂ. ಮೌಲ್ಯದ ಲಾರಿ ಸೇರಿ ಒಟ್ಟೂ 21,75,605 ರೂ. ಮೌಲ್ಯದ ಸ್ವತ್ತುಗಳನ್ನು ಜಪ್ತಿ ಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಅಬಕಾರಿ ಉಪ ಆಯುಕ್ತೆ ವನಜಾಕ್ಷಿ ಎಂ. ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕ ಎಂ.ಎಂ ನಾಯ್ಕ, ಸಿಬ್ಬಂದಿಗಳಾದ ಎನ್ .ಜಿ. ಜೋಗಳೆಕರ, ಸುರೇಶ ಹಾರೂಗೋಪ್ಪ, ರಂಜನಾ ನಾಯ್ಕ, ವೀರೇಶ ಕುರಿಯವರ ಹಾಗೂ ಎನ್. ಎನ್. ಖಾನ ಪಾಲ್ಗೊಂಡಿದ್ದರು.