ಶಿರಸಿ: ದಿನನಿತ್ಯವೂ ಸಮವಸ್ತ್ರದಲ್ಲಿ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿಗಳು ಇಂದು ಬಣ್ಣ ಬಣ್ಣದ ಬಟ್ಟೆ ತೊಟ್ಟು ಮಿಂಚುತ್ತಿದ್ದರು. ಕಲರ್ ಕಲರ್ ಸೀರೆ ಉಟ್ಟ ಹುಡುಗಿಯರು ಒಂದು ಕಡೆ ಆದ್ರೆ ಇನ್ನೊಂದು ಕಡೆ ಹುಡುಗರು ಧೋತಿ ಪಂಚೆಯಲ್ಲಿ ಕಾಲೇಜಿಗೆ ಎಂಟ್ರಿ ಕೊಟ್ಟಿದ್ರು. ಸೆಲ್ಫಿ ಗೆ ಸ್ಮೈಲ್ ಕೊಡೋದೇನು.! ಕಲರ್ ಕಲರ್ ಚಸ್ಮಾ ಹಾಕಿ ಪೋಸ್ ಕೊಡೋದೇನು.! ಎಲ್ಲಿ ನೋಡಿದರು ರಂಗು ರಂಗಿನ ಲೋಕವೇ ಸೃಷ್ಟಿಯಾಗಿತ್ತು. ಈ ದೃಶ್ಯ ಕಂಡು ಬಂದಿದ್ದು ಶಿರಸಿಯ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ.
ಐಕ್ಯೂಎಸಿ ಮತ್ತು ಕಲಾ ವಿಭಾಗ ಹಾಗೂ ಕಾಲೇಜಿನ ಎಲ್ಲಾ ವಿದ್ಯಾರ್ಥಿ ಪ್ರತಿನಿಧಿಗಳು ಸೇರಿ ಸಾಂಪ್ರದಾಯಿಕ ಉಡುಪುಗಳ ದಿನವನ್ನು ಹಮ್ಮಿಕೊಳ್ಳಲಾಗಿತ್ತು. ಹಾಗಾಗಿ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಪು ಧರಿಸಿ ಹಳ್ಳಿಯ ಸೊಗಡನ್ನು ಕಾಲೇಜಿನಲ್ಲಿ ಮೂಡಿಸಿದ್ದರು. ಸೀರೆ, ಪಂಚೆಯಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಎಂಟ್ರಿ ನೀಡಿದರೆ ಮದುವೆ ಮಂಟಪದಂತೆ ಕಾಲೇಜು ಶೃಂಗಾರಗೊಂಡಿತ್ತು.
ಉಪನ್ಯಾಸಕರು ವಿದ್ಯಾರ್ಥಿಗಳೊಂದಿಗೆ ಕೂಡಿ ಸಾಂಪ್ರದಾಯಿಕ ದಿನಕ್ಕೆ ಮೆರಗನ್ನು ತಂದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹಾಡು, ಕುಣಿತ, ಆಟಗಳು ಈ ದಿನಕ್ಕೆ ಇನ್ನಷ್ಟು ಮನರಂಜನೆಯನ್ನು ನೀಡಿದ್ದವು. ಬೇರೆ ಬೇರೆ ರಾಜ್ಯಗಳ ವಿಶಿಷ್ಠ ಸಾಂಪ್ರದಾಯಿಕ ಉಡುಪುಗಳನ್ನು ವಿದ್ಯಾರ್ಥಿಗಳು ಧರಿಸಿದ್ದರು.
ಈ ಮೂಲಕ ನಮ್ಮ ದೇಶದ ಸಾಂಪ್ರದಾಯಿಕತೆಯನ್ನು ಪರಿಚಯಿಸಿ, ಉಳಿಸುವ ಆಶಯದಿಂದ ಈ ದಿನವನ್ನು ನಡೆಸಲಾಯಿತು.
ಒಟ್ಟಿನಲ್ಲಿ ದಿನವೂ ಓದೂ, ಬರಹ, ಪರೀಕ್ಷೆಗಳೆಂದು ಬ್ಯುಸಿ ಇರುತ್ತಿದ್ದ ವಿದ್ಯಾರ್ಥಿಗಳಿಗೆ ಕೊಂಚ ಮನರಂಜನೆ ಸಿಕ್ಕಿದ್ದಂತೂ ಸುಳ್ಳಲ್ಲ.