ಶುಭಲಕ್ಷ್ಮೀ ನಾಯಕರ ಭುವಿಯ ಬಂಧ ಕವನ ಸಂಕಲನ ಲೋಕಾರ್ಪಣೆ.

ಅಂಕೋಲಾ : ಕನ್ನಡ ಸಾಹಿತ್ಯ ಪರಿಷತ್ತು ಅಂಕೋಲಾ ಘಟಕ ಹಾಗೂ ಪ್ರಕೃತಿ ಪ್ರಕಾಶನ ಇವರ ಸಂಯುಕ್ತ ಆಶ್ರಯದಲ್ಲಿ ಶುಭಲಕ್ಷ್ಮೀ ಆರ್ ನಾಯಕ ಅವರ ‘ಭುವಿಯ ಬಂಧ’ ಕವನ ಸಂಕಲನವನ್ನು ಹಿರಿಯ ಸಾಹಿತಿ ರಾಮಕೃಷ್ಣ ಗುಂದಿ ಲೋಕಾರ್ಪಣೆಗೊಳಿಸಿದರು. ಈ ವೇಳೆ ಅವರು ಮಾತನಾಡಿ ಅಂಕೋಲೆಯಲ್ಲಿ ಮಹಿಳಾ ಕವಿಯಿತ್ರಿಯರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರುತ್ತಿರುವದು ಸ್ವಾಗತಾರ್ಹ. ಮಹಿಳೆಯರ‌ಲ್ಲಿರುವ ಸಂವೇದನಾಶೀಲತೆ ಉತ್ತಮ ಕವನಗಳನ್ನು ರಚಿಸಲು ಸಾಧ್ಯವಾಗುತ್ತದೆ. ಭುವಿಯ ಬಂಧ ಕವನ ಸಂಕಲನದಲ್ಲಿ ಮನುಷ್ಯ ಮತ್ತು ಪ್ರಕೃತಿಯ ಸಂಬಂಧ, ಮಾನವೀಯ ಸಂಬಂಧ ಭೂಮಿಯ ರಕ್ಷಣೆ, ಕುಶಲಕರ್ಮಿಗಳ ಮೂಲ ಕಸುಬುಗಳ ಮಹತ್ವ ಮುಂತಾದ ವಿಷಯಗಳ ಕುರಿತು ತುಂಬ ಸೊಗಸಾಗಿ ವರ್ಣಿಸಿದ್ದಾರೆ. ಕಾವ್ಯ ಮತ್ತು ಸಾಹಿತ್ಯ ಎಲ್ಲರನ್ನು ಒಂದು ಗೂಡಿಸುತ್ತದೆ ಹೀಗಾಗಿ ಇನ್ನೂ ಹೆಚ್ಚಿನ ಸಾಹಿತ್ಯ ಕೃಷಿಯಾಗಲಿ ಎಂದರು.
ಕವಿಯಿತ್ರಿ ಶುಭಲಕ್ಷ್ಮೀ ನಾಯಕ ಮಾತನಾಡಿ ಜೀವನದಲ್ಲಿ ಕಂಡ ನೋವು ನಲಿವುಗಳೇ ನನ್ನ ಕವನಗಳಾಗಿ ಹೊರಹೊಮ್ಮಿದೆ. ನನ್ನ ಜನ್ಮ ಭೂಮಿಯಲ್ಲಿ ಜನ್ಮದಾತನ ಉಪಸ್ಥಿತಿಯಲ್ಲೇ ಕವನ ಸಂಕಲನ ಲೋಕಾರ್ಪಣೆಯಾಗಬೇಕೆಂಬ ಬಯಕೆಯನ್ನು ಕನ್ನಡ ಸಾಹಿತ್ಯ ಪೂರೈಸಿದೆ. ಸಾಹಿತ್ಯ ಸಿಂಧುಗಳಲ್ಲಿ ಒಂದು ಬಿಂದುವಾಗಿ ಬರೆದಿದ್ದೇನೆ, ಬೆಸುಗೆ ಇದ್ದರೆ ವಸುಧೆ ಕವನ ಸಂಕಲನಕ್ಕೆ ನೀಡಿದ ಹಾಗೆ ಈ ಕವನ ಸಂಕಲನಕ್ಕೂ ಪ್ರೋತ್ಸಾಹ ನೀಡಿ ಎಂದರು.

ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಮಹೇಶ ನಾಯಕ ಮಾತನಾಡಿ ಶುಭಲಕ್ಷ್ಮೀ ನಾಯಕರ ಕುರಿತು ಮಾತನಾಡಿ ಕಾಲೇಜು ದಿನಗಳಲ್ಲಿ ಒಬ್ಬ ಆದರ್ಶ ವಿದ್ಯಾರ್ಥಿನಿಯಾಗಿದ್ದ ಶುಭಲಕ್ಷ್ಮೀ ತನ್ನ ಜೀವನದಲ್ಲೂ ಆದರ್ಶಪ್ರಾಯರಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿದವರು. ಅವರ ಪತಿ ನಿರಂಜನ ಅವರ ಪ್ರೋತ್ಸಾಹವನ್ನೂ ಬಣ್ಣಿಸಿದರು. ವೇದಿಕೆಯಲ್ಲಿ ಶಿಕ್ಷಕ ಜಿ ಆರ್ ತಾಂಡೇಲ ಕವಿಯಿತ್ರಿ ಶುಭಲಕ್ಷ್ಮೀ ನಾಯಕರವರ ತಂದೆ ರಾಮಚಂದ್ರ ಹೊನ್ನಪ್ಪ ನಾಯಕ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಅಂಕೋಲಾ ತಾಲೂಕ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಮಾತನಾಡಿ ರೈತರ ಬದುಕೇ ಒಂದು ಸಾಹಿತ್ಯ, ಒಬ್ಬ ರೈತನ ಮಗಳಾಗಿ ಕವನ ಸಂಕಲನವನ್ನು ತರುತ್ತಿರುವದು ಬಹಳ ಹರ್ಷದಾಯಕ ಎಂದರು.
ಕಸಾಪ ಕಾರ್ಯದರ್ಶಿ ಜಗದೀಶ ನಾಯಕ ಹೊಸ್ಕೇರಿ ಸ್ವಾಗತಿಸಿದರು. ಸಾಹಿತಿ ಮಹಾಂತೇಶ ರೇವಡಿ ಪ್ರಾಸ್ತಾವಿಕ ಮಾತನಾಡಿದರು.
ಕಸಾಪ ಕಾರ್ಯದರ್ಶಿ ಜಿ ಆರ್ ತಾಂಡೇಲ ವಂದಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ ವಿಠ್ಠಲ ಗಾಂವಕರ, ನಾಗೇಂದ್ರ ನಾಯಕ ತೊರ್ಕೆ, ಜೆ.ಪ್ರೇಮಾನಂದ, ಜಯಶೀಲ ಆಗೇರ, ಎಂ ಬಿ ಆಗೇರ, ಜಿ ಆರ್ ನಾಯ್ಕ, ರಾಜೇಂದ್ರ ಕೇಣಿ, ಸಂದೀಪ ನಾಯಕ, ಹೊನ್ನಮ್ಮ ನಾಯಕ, ಚಂದ್ರಕಲಾ ನಾಯಕ, ಉದಯ ನಾಯಕ, ಇಂದಿರಾ ನಾಯಕ, ಸುಜಾತಾ ನಾಯಕ, ಭವಾನಿ ನಾಯಕ, ಚಂದ್ರಿ ನಾಯಕ, ತೇಜು ನಾಯಕ, ಬಾಬು ನಾಯಕ, ಬಾಬು, ಅನಯ, ಇನ್ನಿತರರು ಇದ್ದರು.

ಕನ್ನಡ ಪ್ರಾಥಮಿಕ ಶಾಲೆಗಳಲ್ಲಿನ ಕನ್ನಡ ಶಿಕ್ಷಕರನ್ನು ತೆಗೆಯುತ್ತಿರುವ ಸರಕಾರದ ನೀತಿಯನ್ನು ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಖಂಡಿಸಿದರು. ಕನ್ನಡ ಭಾಷೆ, ಕನ್ನಡ ಶಿಕ್ಷಕರು, ಕನ್ನಡ ಶಾಲೆಗಳು ಉಳಿಯಬೇಕು ಇಲ್ಲದಿದ್ದರೆ ಕನ್ನಡದ ಅಭಿವೃದ್ಧಿ ಸಾಧ್ಯವಿಲ್ಲ.