​​​ರೈಲು 180 ಕಿಮೀ ವೇಗದಲ್ಲಿ ಚಲಿಸಿದರೂ ಗ್ಲಾಸಿನಲ್ಲಿದ್ದ ನೀರು ತುಳುಕುವುದಿಲ್ಲ: ಪ್ರಹ್ಲಾದ್​ ಜೋಶಿ

ಧಾರವಾಡ: ವಿದೇಶದಲ್ಲಿ ಒಬ್ಬರು ಅತಿ ವೇಗದ ರೈಲನ್ನು ನೋಡಿ ಇಂಥ ರೈಲನ್ನು ಭಾರತದಲ್ಲಿ ನೋಡಲು ಸಾಧ್ಯವೇ ಅಂತ ಟ್ವೀಟ್ ಮಾಡಿದ್ದರು. ಆ ಟ್ವೀಟ್​ನಲ್ಲಿ ಗ್ಲಾಸ್​​ನಲ್ಲಿದ್ದ ನೀರು ಕೂಡ ತುಳಕಿರಲಿಲ್ಲ. ಇಂಥ ರೈಲನ್ನು ಭಾರತದಲ್ಲಿ ನೋಡಲು ಸಾಧ್ಯವೇ ಅಂತ ಕೇಳಿದ್ದರು. ಇದೀಗ ಸಾಧ್ಯವಾಗಿದೆ. ನಮ್ಮ ವಂದೇ ಭಾರತ್ ಎಕ್ಸಪ್ರೆಸ್​​​​ ರೈಲು 180 ಕಿಮೀ ವೇಗದಲ್ಲಿ ಹೋದರೂ ಗ್ಲಾಸಿನಲ್ಲಿದ್ದ ನೀರು ಕೂಡ ತುಳುಕುವುದಿಲ್ಲ. ಅಂಥ ರೈಲು ಇದೀಗ ಆರಂಭವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಇಂದು (ಜೂ.27) ಧಾರವಾಡ-ಬೆಂಗಳೂರು ವಂದೇ ಭಾರತ ಎಕ್ಸಪ್ರೆಸ್​ ರೈಲು ಉದ್ಘಾಟನೆ ಹಿನ್ನೆಲೆ ಧಾರವಾಡ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇದುವರೆಗೂ ದೇಶದಲ್ಲಿ 23 ವಂದೇ ಭಾರತ ರೈಲುಗಳು ಆರಂಭವಾಗಿವೆ. ದೇಶದಲ್ಲಿ ಒಟ್ಟು 400 ರೈಲು ಓಡಿಸುವ ಗುರಿ ಇದೆ ಎಂದರು.

ಇವತ್ತು ಧಾರವಾಡದ ದೃಷ್ಡಿಯಿಂದ ಐತಿಹಾಸಿಕ ದಿನ. ಧಾರವಾಡ ನಿಲ್ದಾಣ ಲೋಕಾರ್ಪಣೆ ಮಾಡಿದಾಗ ರೈಲ್ವೆ ಸಚಿವ ಅಶ್ವಿನಿ ವೈಷ್ಡವ್ ಬಂದಿದ್ದರು. ಅವರಿಗೆ ಮನವಿ ಮಾಡಿದ್ದೆ ನಮ್ಮ ಊರಿಗು ವಂದೇ ಭಾರತ ರೈಲು ಬರಬೇಕೆಂದು. ಧಾರವಾಡ- ಬೆಂಗಳೂರು ಮಧ್ಯೆ ಹಳಿ ಡಬಲಿಂಗ್ ಮಾಡಿದ ನಂತರ ವಂದೇ ಭಾರತ್ ರೈಲು ಕೊಡೋದಾಗಿ ಘೋಷಿಸಿದ್ದರು. ಇದೀಗ ಎಲ್ಲ ಕೆಲಸ ಮುಗಿದಿದೆ. ಇದೀಗ ರೈಲು ಆತಂಭಿಸಿದ್ದೇವೆ ಎಂದು ಹೇಳಿದರು.

ಕೇವಲ ರಾಜಕೀಯ ಕಾರಣಕ್ಕೆ ಆಶ್ವಾಸನೆ ಕೊಡುವವರು ನಾವಲ್ಲ. ಕೆಲಸ ಮಾಡಿ ತೋರಿಸುವವರು ನಾವು. ಧಾರವಾಡದಿಂದ ರೈಲು ಆರಂಭಿಸುವುದಿಲ್ಲ ಎಂದುಕೊಂಡಿದ್ದರು. ಹುಬ್ಬಳ್ಳಿಯಿಂದ ಆರಂಭ ಮಾಡುತ್ತಾರೆ ಅಂದುಕೊಂಡಿದ್ದರು. ಆದರೆ ಧಾರವಾಡದಿಂದಲೇ ವಂದೇ ಭಾರತ್ ಎಕ್ಸ್​ಪ್ರೆಸ್​​​​ ರೈಲು ಸಂಚಾರ ಆರಂಭವಾಗಿದೆ. ಇನ್ನು ಇದರ ನಿರ್ವಹಣೆ ಬೆಂಗಳುರಿನಲ್ಲಷ್ಟೇ ಇದೆ. ಈ ಹಿನ್ನೆಲೆ ಬೆಳಿಗ್ಗೆ ಬೆಂಗಳೂರಿಂದ ರೈಲು ಹೊರಡುತ್ತದೆ. ಹುಬ್ಬಳ್ಳಿಯಲ್ಲಿ ವ್ಯವಸ್ಥೆ ಆದರೆ ಬೆಳಿಗ್ಗೆ ಹೊರಡಲು ಅವಕಾಶ ಸಿಗುತ್ತೆ ಎಂದು ತಿಳಿದರು.

ವೇಳೆ ಬದಲಾವಣೆಗೂ ಜನರ ಮನವಿ ಮಾಡಿದ್ದಾರೆ. ಮೊದಲ ಆರೇಳು ತಿಂಗಳು ಇದೇ ವೇಳೆ ಇರುತ್ತೆ. ಬಳಿಕ ಬದಲಾವಣೆ ಮಾಡಲು ಅವಕಾಶವಿದೆ. ಆಗ ಮಾಡುವ ಭರವಸೆ ನೀಡುತ್ತೇನೆ. ಬೆಳಗಾವಿಯಿಂದ ಕೂಡ ವಂದೇ ಭಾರತ್ ಬೇಕು ಅನ್ನುವ ಬೇಡಿಕೆ ಇದೆ. ಬೆಳಗಾವಿಯಿಂದಲೂ ವಂದೇ ಭಾರತ್ ಸಂಚಾರ ಶುರು ಮಾಡುತ್ತೇವೆ ಎಂದು ಭರವಸೆ ನೀಡಿದರು.

ವಂದೇ ಭಾರತ್ ಸ್ವದೇಶಿ ನಿರ್ಮಿತ ರೈಲು. ಈ ಹಿಂದೆ ದೇಶದಲ್ಲಿ ವಿದ್ಯುತ್ ಸಮಸ್ಯೆ ಇತ್ತು. ಆದರೆ ಇವತ್ತು ವಿದ್ಯುತ್ ರಫ್ತು ಮಾಡೋ ಹಂತಕ್ಕೆ ಬಂದಿದ್ದೇವೆ. ಕೊರೊನಾ ವೈರಸ್​​ಗೆ ದೇಶದಲ್ಲಿ ಲಸಿಕೆ ಕಂಡು ಹಿಡಿದವರು ನಾವು. ಅಂಥವರಿಗೆ ರೈಲು ಮಾಡಲು ಆಗುವುದಿಲ್ಲವೇ. ದೇಶದಲ್ಲಿ 400 ವಂದೇಭಾರತ್​​ ರೈಲು ಸಂಚರಿಸುವ ಗುರಿ ಇದೆ. ವಂದೇ ಭಾರತ್ ಸ್ವದೇಶಿ ನಿರ್ಮಿತ ರೈಲು. ಮೋದಿಯವರ ಆತ್ಮನಿರ್ಭರ ಅಂದರೆ ಇದು ಎಂದು ತಿಳಿಸಿದ್ದಾರೆ.

ರೈಲ್ವೆ ಕೆಲಸಕ್ಕಾಗಿ ರಾಜ್ಯಕ್ಕೆ 7000 ಕೋಟಿ ರೂ. ನೀಡಲಾಗಿದೆ: ಥಾವರ್​ ಚಂದ್​ ಗೆಹ್ಲೋಟ್

ದೇಶದಲ್ಲಿ ರೈಲು ಆಧುನಿಕರಣ ನಡೆದಿದೆ. ಇದಕ್ಕೆ ನಾನು ರೈಲ್ವೆ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ. ದೇಶದಲ್ಕಿ ರೈಲು ಸೇವೆ ಸಾಕಷ್ಟು ಸಹಾಯ ನೀಡುತ್ತೆ. ದೇಶದ ಅಭಿವೃದ್ಧಿಯಲ್ಲಿ ಇಲಾಖೆಯ ಸಾಕಷ್ಟು ಪಾಲಿದೆ. ರೈಲ್ವೆ ಕೆಲಸಕ್ಕಾಗಿ ಕರ್ನಾಟಕಕ್ಕೆ 7000 ಕೋಟಿ ರೂ. ನೀಡಲಾಗಿದೆ. ಇದುವರೆಗೂ ನೀಡಿದ ಅತಿ ಹೆಚ್ಚು ಅನುದಾನ ಇದಲಾಗಿದೆ ಎಂದು ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಹೇಳಿದ್ದಾರೆ.

ಧಾರವಾಡ-ಬೆಂಗಳೂರು ನಡುವೆ ವಂದೇ ಭಾರತ್ ಆರಂಭವಾಗಿದೆ. ನಿಮಗೆಲ್ಲ ಅಭಿನಂದನೆ ಸಲ್ಕಿಸುತ್ತೇನೆ. ವಂದೇ ಭಾರತ್ ದೇಶದ ಗೌರವ, ಹೆಮ್ಮೆ ಇದು ಸಂಪೂರ್ಣ ಸ್ವದೇಶಿ ನಿರ್ಮಿತ ರೈಲು. ಸಚಿವ ಪ್ರಹ್ಲಾದ್​ ಜೋಶಿ ಅವರು ಅನೇಕ ಬೇಡಿಕೆ ಇಟ್ಟಿದ್ದಾರೆ. ಆ ಬಗ್ಗೆ ಇಲಾಖೆಯವರು ಗಮನ ಹರಿಸುತ್ತಾರೆ ಎಂದರು.