ಕುಸಿತ ಕಂಡ ರೇನ್ ಕೋಟ್ ವ್ಯಾಪಾರ- ಕಡಿಮೆ ಖರ್ಚಿನಲ್ಲಿ ಪ್ಲಾಸ್ಟಿಕ್ ಮಳೆ ಹೊದಿಕೆಯತ್ತ ಹೆಚ್ಚಿದ ಜನರ ಒಲವು.

ಗೋಕರ್ಣ – ಸದ್ಯ ಮಳೆಗಾಲ ಪ್ರಾರಂಭಗೊಂಡಿದೆ. ಇದೀಗ ಅಂಗಡಿಗಳಲ್ಲಿ ಸಾಲು, ಸಾಲು ಛತ್ರಿಗಳು, ವಿವಿಧ ಕಂಪನಿಯ ರೇನ್ ಕೋಟ್ ಗಳದ್ದೇ ಹಾವಳಿ. ಮೊದಲು ಈ ರೇನ್ ಕೋಟ್ ಗಳ ವ್ಯಾಪಾರ ಬಹಳ ಚೆನ್ನಾಗಿ ನಡೆಯುತ್ತಿತ್ತು. ಆದರೆ ಇತ್ತೀಚೆಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಪ್ಲಾಸ್ಟಿಕ್ ಅಂಗಿಯಿಂದಾಗಿ ರೇನ್ ಕೋಟ್ ಖರೀದಿಸುವವರು ಕಡಿಮೆಯಾಗಿದ್ದಾರೆ.
ಗೋಕರ್ಣದ ಮಾರುಕಟ್ಟೆಯಲ್ಲಿ ಈ ಪ್ಲಾಸ್ಟಿಕ್ ಅಂಗಿಗಳದ್ದೇ ದರ್ಬಾರು. ಹೊರ ರಾಜ್ಯಗಳಿಂದ ಬರುತ್ತಿರುವ ಪ್ರವಾಸಿಗರಿಂದ, ಇಲ್ಲಿಯ ಸ್ಥಳೀಯ ನಿವಾಸಿಗಳೂ ಸಹ 100 ರೂ ಗೆ ಸಿಗುವ ಈ ಪ್ಲಾಸ್ಟಿಕ್ ಅಂಗಿಯತ್ತ ಆಕರ್ಷಿತರಾಗಿದ್ದಾರೆ. ಸ್ತ್ರೀಯರು ಧರಿಸುವ ನೈಟಿ ಮಾದರಿಯಲ್ಲಿರುವ ಈ ಪ್ಲಾಸ್ಟಿಕ್ ನಿಲುವಂಗಿ ಹಾಕಿಕೊಂಡರೆ ಮೈ ಸಂಪೂರ್ಣ ಮುಚ್ಚುತ್ತದೆ. ಇದರಿಂದ ಸ್ವಲ್ಪವೂ ನೀರು ಒಳಗೆ ಹೋಗುವುದಿಲ್ಲ. ಅಲ್ಲದೇ ಇದನ್ನು ಸುಲಭವಾಗಿ ತೆಗೆದುಕೊಂಡು ಹೋಗಬಹುದು, ಜೊತೆಗೆ ಹಾಳಾದರೂ ಕಡಿಮೆ ಬೆಲೆ ಆಗಿರುವ ಕಾರಣ, ತಲೆ ಕೆಡಿಸಿಕೊಳ್ಳದ ಜನ ಮತ್ತೊಂದನ್ನು ಸುಲಭವಾಗಿ ಖರೀದಿಸಿ ಬಿಡುತ್ತಾರೆ. ಅದೇ ಸಾವಿರಾರು ರೂ. ಬೆಲೆ ಬಾಳುವ ರೇನ್ ಕೋಟ್ ಬಾಳಿಕೆ ಈ ಪ್ಲಾಸ್ಟಿಕ್ ಗಿಂತ ಕಡಿಮೆಯೇ ಆಗಿದ್ದು, ಹಣ ಉಳಿತಾಯದೊಂದಿಗೆ ಉತ್ತಮ ಪಯಣವೂ ಆಗುತ್ತದೆ ಎಂದು ಜನರು ಇದರತ್ತ ಆಸಕ್ತಿ ವಹಿಸಿದ್ದಾರೆ. ಇದರಿಂದ ರೇನ್ ಕೋಟ್ ವ್ಯಾಪಾರ ಇಳಿಮುಖವಾಗಿದ್ದು, ಗೋಕರ್ಣದಲ್ಲಿ ರೇನ್ ಕೋಟ್ ವ್ಯಾಪಾರಿಗಳಿಗೆ ಇದು ಹಿನ್ನಡೆಯಾಗಿದೆ.