2047ರ ವೇಳೆಗೆ ಸಿಕಲ್‌ ಸೆಲ್‌ ಅನೀಮಿಯಾ ಮುಕ್ತವಾಗಬೇಕು ಭಾರತ, ಪ್ರಧಾನಿ ಮೋದಿ ಇಂದು ಆರೋಗ್ಯ ಮಿಷನ್​​ಗೆ ಚಾಲನೆ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಜೂನ್ 27) ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ರಾಷ್ಟ್ರೀಯ ಕುಡಗೋಲು ಕಣ ರಕ್ತಹೀನತೆ  ನಿವಾರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಬುಡಕಟ್ಟು ಸಮುದಾಯದ ಜನರು ಈ ಕಾಯಿಲೆಗೆ ಗಣನೀಯವಾಗಿ ಒಳಗಾಗುತ್ತಿದ್ದಾರೆ. ಈ ಕಾರಣಕ್ಕೆ ಕುಡಗೋಲು ಕಣ ರಕ್ತಹೀನತೆ (ಸಿಕಲ್‌ ಸೆಲ್‌ ಅನೀಮಿಯಾ) ನಿವಾರಣೆ ಕಾರ್ಯಕ್ರಮವನ್ನು ಪ್ರಾರಂಭಿಸಲಿದೆ. ಈಗಾಗಲೇ ಕೇಂದ್ರ ಸರ್ಕಾರವು ರಾಷ್ಟ್ರದಾದ್ಯಂತ 17 ರಾಜ್ಯಗಳಲ್ಲಿ ವಾಸಿಸುವ ಸುಮಾರು 70 ಮಿಲಿಯನ್ ಜನರ ಮೇಲೆ ಸಿಕಲ್‌ ಸೆಲ್‌ ಅನೀಮಿಯಾ ಪರಿಣಾಮ ಬೀರುತ್ತದೆ ಎಂದು ಪತ್ತೆ ಮಾಡಿದೆ. ಈ ಕಾಯಿಲೆಯನ್ನು ತಡೆಗಟಲು ಮತ್ತು ಇದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಆರೋಗ್ಯ ಮಿಷನ್ ರಚಿಸಲಾಗಿದೆ, ವಿಶೇಷವಾಗಿ ಬುಡಕಟ್ಟು ಸಮುದಾಯಕ್ಕೆ ಇದರ ಪರಿಣಾಮ ಹೆಚ್ಚಾಗಿರುವ ಕಾರಣ ಅವರಿಗೆ ಇದರ ಅಗತ್ಯತೆಗಳನ್ನು ತಿಳಿಸಲಾಗುವುದು.

ಮಿಷನ್ 2047ರ ವೇಳೆಗೆ ದೇಶದಲ್ಲಿ ಸಿಕಲ್‌ ಸೆಲ್‌ ಅನೀಮಿಯಾ ಮುಕ್ತವಾಗಿರಬೇಕು ಎಂಬ ಉದ್ದೇಶದಿಂದ, ಕೇಂದ್ರ ಸರ್ಕಾರ ಈ ಕ್ರಮವನ್ನು ತರಲು ಮುಂದಾಗಿದೆ. ಈ ಹಂತದಲ್ಲಿಯೇ ಅವುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ತರಲಾಗುವುದು, ಇದಕ್ಕೆ ಪರಿಹಾರಗಳೇನು ಎಂಬುದ ಬಗ್ಗೆಯು ಈ ಕಾರ್ಯಕ್ರಮದಲ್ಲಿ ತಿಳಿಸಲಾಗುವುದು.

ರಾಷ್ಟ್ರೀಯ ಕುಡಗೋಲು ಕಣ ರಕ್ತಹೀನತೆ (ಸಿಕಲ್‌ ಸೆಲ್‌ ಅನೀಮಿಯಾ) ನಿರ್ಮೂಲನೆ ಮಿಷನ್​ನ್ನು 17 ರಾಜ್ಯಗಳಲ್ಲಿ 278 ಜಿಲ್ಲೆಗಳಾದ್ಯಂತ ಕಾರ್ಯಗತಗೊಳಿಸಲಾಗುವುದು, 2023ರ ಕೇಂದ್ರ ಬಜೆಟ್​​​ನಲ್ಲಿ ಈ ಬಗ್ಗೆ ಘೋಷಣೆ ಕೂಡ ಮಾಡಲಾಗಿದೆ. ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್, ಛತ್ತೀಸ್ಗಢ, ಪಶ್ಚಿಮ ಬಂಗಾಳ, ಒಡಿಶಾ, ತಮಿಳು ನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಅಸ್ಸಾಂ, ಉತ್ತರ ಪ್ರದೇಶ, ಕೇರಳ, ಬಿಹಾರ ಮತ್ತು ಉತ್ತರಾಖಂಡ ಈ ರಾಜ್ಯಗಳಲ್ಲಿ ಈ ಕಾರ್ಯಕ್ರಮಗಳನ್ನು ನಡೆಸಲಾಗುವುದು.

2047ರ ವೇಳೆಗೆ ಕುಡಗೋಲು ಕಣ ರೋಗವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿರುವ ಕೇಂದ್ರ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಕಾಯಿಲೆಗೆ ಚಿಕಿತ್ಸೆ ಕಂಡುಹಿಡಿಯಲು 70 ಮಿಲಿಯನ್ ಜನರ ತಪಾಸಣೆಗೆ ಒಳಪಡಿಸಲಾಗುವುದು. ಹೆಚ್ಚುವರಿಯಾಗಿ, ಸಿಕಲ್ ಸೆಲ್ ಸ್ಕ್ರೀನಿಂಗ್ ಹೊಂದಿರುವ ಪ್ರತಿಯೊಬ್ಬರಿಗೂ sickle cell ಕಾರ್ಡ್ ನೀಡಲಾಗುವುದು ಎಂದು ಮಾಂಡವಿಯಾ ಹೇಳಿದ್ದಾರೆ.