ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಜೇನುಕೃಷಿ.! ಕಡಿಮೆ ಬಂಡವಾಳದಿಂದ ಲಕ್ಷಗಟ್ಟಲೆ ಆದಾಯಗಳಿಸಿದ ರಾಜೀವ್ ಭಟ್.!

ಕುಮಟಾ: ಗ್ರಾಮೀಣ ಜನರ ಬದುಕು ನಿಂತಿರುವುದೇ ಕೃಷಿಯ ಮೇಲೆ. ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡು ಜೀವನ ಸಾಗಿಸುತ್ತಿರೋ ಅದೆಷ್ಟೋ ಕುಟುಂಬಗಳು ಪ್ರತಿ ವರ್ಷ ಹೊಸ ಹೊಸ ಸವಾಲುಗಳನ್ನ ಎದುರಿಸುತ್ತಿದ್ದಾರೆ. ಕಾಡುಪ್ರಾಣಿಗಳ ಹಾವಳಿ, ಪ್ರಕೃತಿ ವಿಕೋಪ, ದರಗಳ ಏರಿಳಿತ ಹೀಗೆ ಇನ್ನೂ ಅನೇಕ ಸವಾಲುಗಳು ಕೃಷಿ ಕಸುಬಿನಲ್ಲಿ ಸಾಮಾನ್ಯ. ಆದರೆ ಇಂತಹ ಸವಾಲುಗಳನ್ನ ಮೆಟ್ಟಿನಿಂತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರೆ ಕೃಷಿ ಲಾಭದಾಯಕವಾಗುವುದರಲ್ಲಿ ಎರಡು ಮಾತಿಲ್ಲ. ‘ಅನಿವಾರ್ಯತೆಯೇ ಆವಿಷ್ಕಾರಕ್ಕೆ ಕಾರಣ’ ಎನ್ನುವಂತೆ ಹೊಸ ಆಲೋಚನೆಗಳು, ತಂತ್ರಜ್ಞಾನಗಳು ಕೃಷಿಯಲ್ಲಿ ಬದಲಾವಣೆಗೆ ನಾಂದಿ ಹಾಡಿವೆ.

ಹೌದು.! ಕೃಷಿಯಲ್ಲಿ ವ್ಯಾಪಕ ಬದಲಾವಣೆಗಳು ಆಗುತ್ತಿರುವುದು ನಮಗೆಲ್ಲಾ ಗೊತ್ತಿರುವ ಸಂಗತಿ. ಏಕಬೆಳೆ ಕೃಷಿ ಬದಲಿಗೆ ಬಹುಬೆಳೆ ಆಧಾರಿತ ಕೃಷಿ ಇತ್ತೀಚಿನ ದಿನಗಳಲ್ಲಿ ಪ್ರಚಲಿತಕ್ಕೆ ಬರುತ್ತಿದೆ. ಇದರಿಂದ ಆರ್ಥಿಕವಾಗಿಯೂ
ಲಾಭಗಳಿಸಬಹುದು ಎಂಬುದನ್ನ ಅನೇಕರು ನಿರೂಪಿಸಿದ್ದಾರೆ. ಇಂತಹ ಪ್ರಗತಿಪರ ಕೃಷಿಕರಲ್ಲಿ ಕುಮಟಾ ತಾಲೂಕಿನ ಅಳಕೋಡ ಗ್ರಾ.ಪಂ ವ್ಯಾಪ್ತಿಯ ಬೆಳ್ಳಂಗಿಯ ರಾಜೀವ ಭಟ್ಟ ಕೂಡಾ ಒಬ್ಬರು.

ಅಡಿಕೆಯ ಜೊತೆ ಜೆನು ಸಾಕಾಣಿಕೆ

ರಾಜೀವ್ ಭಟ್ ಅಡಿಕೆಯ ಜೊತೆಜೊತೆಗೆ ಉಪಕಸುಬಾಗಿ ಜೇನು ಸಾಕಾಣಿಕೆ ಕೃಷಿ ಕೈಗೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದಾರೆ. ಕೃಷಿಯ ಜೊತೆ ಖುಷಿಯಾಗಿ ಬದುಕಬಹುದು ಎಂಬುದನ್ನ ಸಾಧಿಸಿ ತೋರಿಸಿದ್ದಾರೆ. ಕಳೆದ 15 ವರ್ಷಗಳ ಹಿಂದೆ ಕಡಿಮೆ ಬಂಡವಾಳದೊಂದಿಗೆ ಉಪಕಸುಬಾಗಿ ಆರಂಭಿಸಿದ ಜೇನು ಕೃಷಿ ಇದೀಗ ಅವರ ಕೈಹಿಡಿದು ಉದ್ಯಮವಾಗಿ ಬೆಳೆದಿದೆ. ವಿವಿಧೆಡೆ ಜೇನು ತುಪ್ಪ ಪೂರೈಕೆ ಮಾಡುವ ರಾಜೀವ ಭಟ್ಟ ಅವರು, ವಾರ್ಷಿಕವಾಗಿ ಅಂದಾಜು 1 ಲಕ್ಷ ರೂಪಾಯಿಗೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆ.

ಜೇನುಕೃಷಿ ತರಬೇತಿ ಪಡೆದ ರಾಜೀವ್

ಸರ್ಕಾರದಿಂದ ಜೇನು ಕೃಷಿಗೆ ಸಬ್ಸಿಡಿ ಇದೆ. ಆದರೆ ಎಷ್ಟೋ ರೈತರು ಸಬ್ಸಿಡಿಗಾಗಿಯೇ ಜೇನು ಪೆಟ್ಟಿಗೆಗಳನ್ನ ತೆಗೆದುಕೊಂಡು ನಂತರ ಅದರಲ್ಲಿ ಆಸಕ್ತಿ ತೋರಿಸದೇ ಕೈಚೆಲ್ಲಿ ಬಿಡುತ್ತಾರೆ. ಆದರೆ ಜೇನು ಕೃಷಿಯ ಬಗ್ಗೆ ತರಬೇತಿ ಪಡೆದು ಸರ್ಕಾರದ ಸಹಾಯಧನದ ಸೌಲಭ್ಯ ಪಡೆದು ಉದ್ದಿಮೆಯನ್ನಾಗಿಸಿಕೊಂಡ ರಾಜೀವ್ ಇತರರಿಗೆ ಮಾದರಿಯಾಗಿದ್ದಾರೆ.

ಕಡಿಮೆ ಬಂಡವಾಳದಿಂದ ಲಕ್ಷದವರೆಗೆ

ಮೊದಲು 10 ಪೆಟ್ಟಿಗೆಯಿಂದ ಜೇನು ಕೃಷಿ ಆರಂಭಿಸಿದ ಅವರು ನಂತರ ಕೃಷಿ ಜಮೀನಿನ ಸುತ್ತಮುತ್ತ ಹಾಗೂ ಅರಣ್ಯ ಪ್ರದೇಶದಲ್ಲಿ ಜೇನುಪೆಟ್ಟಿಗೆಗಳನ್ನ ಇಡಲು ಆರಂಭಿಸಿದರು. ಜೇನು ಕೃಷಿಯಲ್ಲಿ ಲಾಭವಿದೆ ಎಂದು ತಿಳಿದು
ನಂತರ ಹೊಸ ಸಾಹಸಕ್ಕೆ ಕೈಹಾಕಿದರು. ಹೆಚ್ಚು ಹೆಚ್ಚು ಜೇನುಗೂಡುಗಳನ್ನ ಮಾಡಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಪಡೆಯಲು ಬೇಕಾದ ಎಲ್ಲಾ ಮಾರ್ಗಗಳನ್ನು ಕಂಡುಕೊಂಡರು.

ಜೇನು ಕೃಷಿ ಬಗ್ಗೆ ಹೇಳಿದ್ದೇನು.?

ನಮ್ಮ ಜೊತೆ ಮಾತಿಗಿಳಿದ ರಾಜೀವ್ ‘ಸುಮಾರು 45 ಜೇನು ಪೆಟ್ಟಿಗೆಯನ್ನು ಇಟ್ಟು ತುಪ್ಪ ಸಂಗ್ರಹಿಸಲಾಗುತ್ತಿದೆ. ವಾರ್ಷಿಕವಾಗಿ 1.5 ಕ್ವಿಂಟಾಲ್ ತುಪ್ಪ ಸಂಗ್ರಹಿಸುತ್ತಿದ್ದೇನೆ. ಜೇನು ಸಾಕಲು ಪ್ರತಿನಿತ್ಯವೂ ಜಾಗೃತೆ ಅತ್ಯವಶ್ಯ.
ಋತುಮಾನಗಳಿಗೆ ಅನುಗುಣವಾಗಿ ಚೆಂಡು ಹೂವು, ಇತರೆ ಹೂವುಗಳಿರುವ ಪ್ರದೇಶದಲ್ಲಿ ಪೆಟ್ಟಿಗೆ ಇಡಲಾಗುತ್ತದೆ. ಹೂವುಗಳಲ್ಲಿರುವ ಮಕರಂದ ಹೀರಿದ ಜೇನು ಹುಳಗಳು ಪೆಟ್ಟಿಗೆ ಸೇರುತ್ತವೆ. ಉಳಿದ ದಿನಗಳಲ್ಲಿ ಅರಣ್ಯ ಪ್ರದೇಶದಲ್ಲಿ ಇಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಜೇನಿನಲ್ಲಿ ತುಡುವೆ ಜೇನು, ಹೆಜ್ಜೇನು ಮತ್ತು ಮಿಸ್ರಿ ಜೇನು ಎಂಬ ವಿಧಗಳಿವೆ. ಹೆಜ್ಜೇನು ಸಾಕಾಣಿಕೆಗೆ ಯೋಗ್ಯವಲ್ಲ. ಆದರೆ ಅದರ ತುಪ್ಪಕ್ಕೆ ಬಹಳ ಬೇಡಿಕೆ ಇದೆ. ನಾನು ತುಡುವೆ ಮತ್ತು ಮಿಸ್ರಿ ಜೇನು ಸಾಕಿದ್ದೇನೆ. ಮಿಸ್ರಿ ಜೇನುಗಳು ಗ್ರಾಂ ಲೆಕ್ಕಗಳಲ್ಲಿ ತುಪ್ಪ ಉತ್ಪಾದನೆ ಮಾಡುತ್ತವೆ. ಆದ್ದರಿಂದ ತುಡುವೆ ಜೇನನ್ನು ಹೆಚ್ಚಿನ ಪ್ರಮಾಣದಲ್ಲಿ ಸಾಕಾಣಿಕೆ ಮಾಡಲಾಗಿದೆ. ಕಡಿಮೆ ಬಂಡವಾಳದಿಂದ ಅಧಿಕ ಆದಾಯ ಗಳಿಸಲು ಜೇನು ಸಾಕಾಣಿಕೆ ಉಪಯುಕ್ತ. ಮಾರ್ಚ್, ಏಪ್ರಿಲ್, ಮೇ ಮತ್ತು ಜೂನ್ ಮೊದಲ ವಾರದವರೆಗೂ ಜೇನುತುಪ್ಪ ಸಂಗ್ರಹಿಸಲಾಗುತ್ತದೆ. ಡಿಸೆಂಬರ್ ತಿಂಗಳಿನಲ್ಲಿ
ಅಂಟವಾಳಕಾಯಿ ಬಿಡುವ ಸಂದರ್ಭವಾಗಿದ್ದು, ಆ ಸಮಯದಲ್ಲಿ ಮರದ ಸಮೀಪ ಪೆಟ್ಟಿಗೆ ಇಡಲಾಗುತ್ತದೆ. ಅಂಟವಾಳ ಹೂವಿನಿಂದ ಸಂಗ್ರಹವಾದ ತುಪ್ಪ ಜೌಷಧಿ ತಯಾರಿಕೆಗೆ ಬಳಕೆಯಾಗುತ್ತದೆ. ಪ್ರತಿ ಕೆ.ಜಿಗೆ 2 ಸಾವಿರ ರೂ. ದರವಿದ್ದು, ಈ ವರ್ಷ 30 ಕೆ.ಜಿ ಅಂಟವಾಳ ತುಪ್ಪ ಉತ್ಪಾದನೆಯಾಗಿದೆ ಎನ್ನುತ್ತಾರೆ ರಾಜೀವ ಭಟ್.

ಜೇನು ತುಪ್ಪಕ್ಕೆ ಬಹಳ ಬೇಡಿಕೆ

ಉತ್ಪಾದಿಸಿದ ಜೇನು ತುಪ್ಪ ಖರೀದಿಸಲು ಖಾಯಂ ಗ್ರಾಹಕರಿದ್ದಾರೆ. ಅಲ್ಲದೇ ಸೊಸೈಟಿಗಳಿಗೆ ನೀಡುತ್ತಿದ್ದೇನೆ. ಪ್ರತಿ ಕೆ.ಜಿ ತುಪ್ಪಕ್ಕೆ 500 ರೂ ವರೆಗೆ ಮಾರಾಟ ಮಾಡಲಾಗುತ್ತಿದೆ. ಯಾವುದೇ ಕಲಬೆರಕೆ ಮಾಡದೇ ಉತ್ತಮ
ಗುಣಮಟ್ಟದ ಜೇನು ತುಪ್ಪ ಪೂರೈಸುವುದು ನನ್ನ ಮೂಲ ಉದ್ದೇಶ.

ಇನ್ನು ಪರಾಗಸ್ಪರ್ಶ ಮತ್ತು ಜೇನು ನೋಣಗಳ ಉಪಚಾರದ ಬಗ್ಗೆ ಮಾಹಿತಿ ನೀಡುತ್ತೇನೆ. ಆಸಕ್ತರು ಜೇನು ಕೃಷಿ ಸಂದರ್ಭದಲ್ಲಿ ಆಗಮಿಸಿದರೆ ಅವರಿಗೆ ಉಚಿತವಾಗಿ ತರಬೇತಿ ನೀಡುತ್ತೇನೆ.

– ರಾಜೀವ ಭಟ್, ಜೇನು ಕೃಷಿಕ

ಕೃಷಿಯಿಂದ ಲಾಭವೇ ಹೊರತು ನಷ್ಟವಿಲ್ಲ.!

ಒಟ್ಟಾರೆ ಮೂಲಕೃಷಿಯೊಂದಿಗೆ ಉಪಕಸುಬುಗಳನ್ನ ಆಯ್ಕೆ ಮಾಡಿಕೊಂಡು ಕೃಷಿ ಮಾಡಿದರೆ ಆರ್ಥಿಕವಾಗಿ ಲಾಭಗಳಿಸಲು ಸಾಧ್ಯ. ಕೃಷಿ ಎಂದರೆ ನಷ್ಟವಲ್ಲ. ಯಾವುದೇ ಐಟಿ ಜಾಬ್ ಗಿಂತ ಕಡಿಮೆಯಿಲ್ಲ ಎನ್ನುವುದನ್ನ ಸಾಧಿಸಿತೋರಿಸಿದ್ದಾರೆ. ಅವರ ಕೃಷಿ ಬೇರೆಯವರಿಗೆ ಮಾದರಿಯಾಗಿ ಒಂದಿಷ್ಟು ಜನ ಜೇನು ಕೃಷಿಯಲ್ಲಿ ತೊಡಗಿಸಿಕೊಂಡರೆ ನಮ್ಮ ಪ್ರಯತ್ನವೂ ಸಾರ್ಥಕ.