ತಂಬೂರ ಕ್ರಾಸ್ ಬಳಿ ಟ್ಯಾಂಕರ್ ಪಲ್ಟಿ.!

ಯಲ್ಲಾಪುರ: ಟ್ಯಾಂಕರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ತಂಬೂರ ಕ್ರಾಸ್ ಬಳಿ ಸೋಮವಾರ ನಡೆದಿದೆ. ಡೀಸೆಲ್ ಸಾಗಿಸಿ ಮರಳುತ್ತಿದ್ದ ಖಾಲಿ ಟ್ಯಾಂಕರ್ ಹೆದ್ದಾರಿಯ ಮಧ್ಯದಲ್ಲಿ ಪಲ್ಟಿಯಾಗಿದೆ. ಇದರಿಂದ ಟ್ಯಾಂಕರ್ ಜಖಂಗೊಂಡಿದ್ದು, ಚಾಲಕ ನಿರ್ವಾಹಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಘಟನೆಯಿಂದಾಗಿ ಹೆದ್ದಾರಿಯಲ್ಲಿ 2 ತಾಸಿಗೂ ಹೆಚ್ಚು ಕಾಲ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ತಂಬೂರ ಕ್ರಾಸ್ ನಿಂದ ಹೊಸಳ್ಳಿ, ಕಿರವತ್ತಿವರೆಗೆ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಳಿಕ ಪಲ್ಟಿಯಾದ ಲಾರಿಯನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.