ಶಿರಸಿ: ನಗರದ ಹಳೆ ಬಸ್ ನಿಲ್ದಾಣದ ಬಳಿ ವೇಗವಾಗಿ ಬಂದ ಬೈಕ್ ದಾರಿಹೋಕನಿಗೆ ಬಡಿಯಿತು.! ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದ ಸವಾರನನ್ನು ನೋಡಿದ ಸ್ಥಳೀಯರು ತಕ್ಷಣವೇ ಆಂಬೂಲೆನ್ಸ್ ಗೆ ಕರೆಮಾಡಿದರು.! ಆಂಬೂಲೆನ್ಸ್ ನ ವೈದ್ಯ ಪರೀಕ್ಷಿಸಿ ತ್ವರಿತವಾಗಿ ದೊಡ್ಡಾಸ್ಪತ್ರೆಗೆ ಸಾಗಿಸುವಂತೆ ಸೂಚಿಸಿದರು. ಎಲ್ಲವೂ ತ್ವರಿತವಾಗಿ ನಡೆದು ಆಂಬೂಲೆನ್ಸ್ ಕುಮಟಾ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಅಪಘಾತಕ್ಕೊಳಗಾದ ವ್ಯಕ್ತಿ ಸಾವಿಗೀಡಾಗಿದ್ದಾನೆ ಅನ್ನೋ ಮಾಹಿತಿ ಬಂತು.! ಅವನ ಶವ ವಾಪಸ್ ಬರುತ್ತಿದ್ದಂತೇ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತು.!
ಕ್ಷಮಿಸಿ..! ಇದು ನಿಜವಾದ ಅಪಘಾತ ಪ್ರಕರಣವಲ್ಲ. ಆದರೆ ಜಿಲ್ಲೆಯಲ್ಲಿ ನೈಜವಾಗಿ ಏನಾಗುತ್ತಿದೆ.? ಎಂಬುದನ್ನು ಜನತೆಗೆ ತಿಳಿಸುವ ಅಣಕು ಪ್ರದರ್ಶನ.
ಹೌದು.! ಜಿಲ್ಲೆಯಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಆಗ್ರಹ ಜೋರಾಗುತ್ತಿದೆ. ಜಿಲ್ಲೆಯ ಜನತೆ ಗಾಯಾಳುಗಳನ್ನು ಹೊತ್ತು ಮಂಗಳೂರಿಗೋ, ಹುಬ್ಬಳ್ಳಿಗೋ ಸಾಗುಸುವ ವೇಳೆ ಸಾವಿಗೀಡಾಗುವ ಸ್ಥಿತಿ ಇದ್ದರೂ ಜನಪ್ರತಿನಿಧಿಗಳು ಕಾಳಜಿ ತೋರುತ್ತಿಲ್ಲ ಎಂಬ ಆರೋಪ ಪ್ರಬಲವಾಗುತ್ತಿದೆ. ಸುಸಜ್ಜಿತ ಆಸ್ಪತ್ರೆಗೆ ಆಗ್ರಹಿಸಿ ಸಾರ್ವಜನಿಕರು ಸೋಮವಾರ ಈ ಅಣಕು ಪ್ರದರ್ಶನದೊಂದಿಗೆ ಪ್ರತಿಭಟನೆ ನಡೆಸಿದರು.
ಸುರಿಯುವ ಮಳೆಯನ್ನೂ ಲೆಕ್ಕಿಸದೇ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸುಭಾಸ ನಾಯ್ಕ, ಜಿಲ್ಲೆಯ ಈ ಸ್ಥಿತಿಗೆ ಯಾವೊಂದು ಪಕ್ಷ ಹೊಣೆಯಲ್ಲ. ಕಳೆದ 25 ವರ್ಷಗಳಲ್ಲಿ ಎಲ್ಲ ಪಕ್ಷದ ಜನಪ್ರತಿನಿಧಿಗಳೂ ಆಡಳಿತ ನಡೆಸಿದ್ದಾರೆ. ಆದರೆ ಇದುವರೆಗೂ ಯಾರೂ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಇದರ ಪರಿಣಾಮ ಗಾಯಾಳುಗಳನ್ನು ಹೊತ್ತ ಅಂಬುಲೆನ್ಸ್ ಅಪಾಯಕಾರಿ ವೇಗದಲ್ಲಿ ತೆರಳುವಂತಾಗಿದೆ ಎಂದರು.
ರೆಡ್ ಆಂಟ್ ಸಂಘಟನೆಯ ಮಹೇಶ ನಾಯ್ಕ ಮಾತನಾಡಿ, ಕಾಳಿ ವಿದ್ಯುತ್ ಡ್ಯಾಂ, ಕೈಗಾ ಅಣುಸ್ಥಾವರದಂತಹ ಹಲವು ಯೋಜನೆಗಳಿಗಾಗಿ ಜಿಲ್ಲೆಯ ಜನತೆ ತ್ಯಾಗ ಮಾಡಿದ್ದಾರೆ. ಆದರೆ ಜಿಲ್ಲೆಯ ಜನರ ಆರೋಗ್ಯದ ಬಗ್ಗೆ ಸರ್ಕಾರಗಳು ಯಾವುದೇ ಕಾಳಜಿ ವಹಿಸುತ್ತಿಲ್ಲ. ತ್ವರಿತವಾಗಿ ನಿರ್ಮಾಣವಾಗಬೇಕಾದ ಆಸ್ಪತ್ರೆಗೆ ಇನ್ನೂ ಕಾಯಬೇಕಾದ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಭಿರಾಮ ಹೆಗಡೆ, ರವೀಂದ್ರ ನಾಯ್ಕ, ಪ್ರಸನ್ನ ಶೆಟ್ಟಿ, ಮಹಾದೇವ ಚಲವಾದಿ, ಶ್ರೀಪಾದ ಹೆಗಡೆ ಕಡವೆ ಸೇರಿದಂತೆ ಅನೇಕರು ಈ ವೇಳೆ ಹಾಜರಿದ್ದರು.