ಸಿದ್ದಾಪುರ: ಪ್ರಯಾಣಿಕರಿಗೆ ಅನುಕೂಲವಾಗಬೇಕಿದ್ದ ಬಸ್ ತಂಗುದಾಣಗಳು ಸೂಕ್ತ ನಿರ್ವಹಣೆ ಇಲ್ಲದೇ ಪಾಳು ಬಿದ್ದಿವೆ. ಇನ್ನು ಅನೇಕ ಕಡೆ ಸುತ್ತಲು ಗಿಡ-ಗಂಟಿಗಳ ಹಿಂಡು ಬೆಳೆದು ಬಸ್ ನಿಲ್ದಾಣವೇ ಕಾಣದಂತಾಗಿದೆ. ಇದರಿಂದ ಎಷ್ಟೋ ಕಡೆ ತಂಗುದಾಣವಿದ್ದರೂ ರಸ್ತೆಯಂಚಿನಲ್ಲಿ ನಿಲ್ಲುವ ಸ್ಥಿತಿ ತಲೆದೋರಿದೆ. ಇದೇ ರೀತಿ ತಾಲೂಕಿನ ಗ್ರಾಮೀಣ ಪ್ರದೇಶದ ಹಲವು ತಂಗುದಾಣಗಳು ನಿರ್ವಹಣೆ ಇಲ್ಲದೇ ನಿಷ್ಪ್ರಯೋಜಕವಾಗಿವೆ.
ಅಧೋಗತಿ ತಲುಪಿದ ತಂಗುದಾಣಗಳು.!
ತಾಲೂಕಿನ ಕಾನಗೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಬೈಲ್ ಕ್ರಾಸ್‌ನಲ್ಲಿರುವ ಬಸ್ ತಂಗುದಾಣವು ಸುತ್ತಲೂ ಗಿಡ-ಗಂಟಿಗಳಿಂದ ಸುತ್ತುವರೆದು ಹಗಲಿನಲ್ಲಿಯೇ ಹುಡುಕಬೇಕಾದ ಸ್ಥಿತಿ ತಲುಪಿದೆ. ಇನ್ನು ಪ್ರಯಾಣಿಕರು ಕಾಲಿಡಲೂ ಹೆದರುವ ದುಸ್ಥಿತಿ ಎದುರಾಗಿದೆ.
ತಂಗುದಾಣಗಳ ಒಳಗೆ ಹೊಗುವುದಕ್ಕೇ ಭಯ.!
ಅಲ್ಲದೇ ಸಿದ್ದಾಪುರ-ಸಾಗರ ರಸ್ತೆಯಲ್ಲಿರುವ ತಂಗುದಾಣ ಕೂಡ ನಿರ್ವಹಣೆ ಇಲ್ಲದೆ ಪಾಳು ಬೀಳುವ ಹಂತ ತಲುಪಿದೆ. ತಂಗುದಾಣದಲ್ಲಿ ನಿಂತರೆ ಬಸ್ಟಾಂಟಾಂಡ್ ಮುರಿದು ಬೀಳಬಹುದೆನ್ನುವ ಭಯದಿಂದ ರಸ್ತೆಯಂಚಿನಲ್ಲಿಯೇ ತಾಸುಗಟ್ಟಲೆ ಬಸ್ಸಿಗಾಗಿ ಕಾಯುತ್ತ ನಿಲ್ಲುವ ಸಮಸ್ಯೆಯನ್ನು ಜನ ಎದುರಿಸುತ್ತಿದ್ದಾರೆ.
ಸಾರ್ವಜನಿಕ ಆಸ್ತಿಯನ್ನ ರಕ್ಷಣೆ ಮಾಡಬೇಕಲ್ಲವೇ.?!
ಇನ್ನು ಕೆಲ ತಂಗುದಾಣಗಳಲ್ಲಿ ಗೋಡೆಗಳಿದ್ದು ಮೇಲ್ಛಾವಣಿ ಹಾರಿಹೋಗಿದೆ. ಅನೇಕ ಕಡೆ ಹೊಲಸಿನಿಂದ ಗಬ್ಬೆದ್ದು ನಾರುತ್ತಿದೆ. ತಮ್ಮ ವ್ಯಾಪ್ತಿಯ ಸಾರ್ವಜನಿಕ ಆಸ್ತಿಯ ರಕ್ಷಣೆ ಮಾಡಬೇಕಾದ ಗ್ರಾಮ ಪಂಚಾಯಿತಿಗಳು ಸೂಕ್ತ ನಿರ್ವಹಣೆ ಮಾಡದಿರುವುದು ಎದ್ದು ಕಾಣುತ್ತಿದೆ. ಇದರಿಂದಾಗಿ ತಂಗುದಾಣಗಳಿದ್ದೂ ಸಾರ್ವಜನಿಕರ ಪಾಲಿಗೆ ಇಲ್ಲದಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಸ್ಥಳೀಯಾಡಳಿತ ಪ್ರಯಾಣಿಕರಿಗೆ ತಂಗಲು ಸೂಕ್ತ ವ್ಯವಸ್ಥೆಯನ್ನು ಮಾಡಬೇಕೆಂದು ಜನ ಆಗ್ರಹಿಸುತ್ತಿದ್ದಾರೆ.