ಪತ್ರಕರ್ತರು ಜೀವದ ಹಂಗು ತೊರೆದು ಕೆಲಸ ಮಾಡುತ್ತಾರೆ.! ಪತ್ರಕರ್ತರ ಕಾರ್ಯಕ್ಕೆ ರೂಪಾಲಿ ನಾಯ್ಕ್ ಶ್ಲಾಘನೆ

ಕಾರವಾರ: ಪತ್ರಿಕಾ ರಂಗ ವಿಸ್ತಾರವಾಗುತ್ತಿದೆ. ವಾಟ್ಸಾಪ್, ಆನ್‌ಲೈನ್ ಮೂಲಕ ಎಷ್ಟೇ ಸುದ್ದಿ ವೇಗವಾಗಿ ಬಂದರೂ ಮಾರನೇ ದಿನ ಪತ್ರಿಕೆಯಲ್ಲಿ ಸುದ್ದಿ ಓದುವುದು, ಟಿವಿಯಲ್ಲಿ ಸುದ್ದಿ ನೋಡುವ ಖುಷಿಯೇ ಬೇರೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.

ಪತ್ರಿಕಾಭವನ ನಿರ್ವಹಣಾ ಸಮಿತಿ ವತಿಯಿಂದ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬರವಣಿಗೆಯಿಂದ ಅಮಾಯಕರು ಬಲಿಯಾಗಬಾರದು. ಸತ್ಯ, ವಾಸ್ತವವನ್ನೇ ಬರೆಯಬೇಕು. ತಪ್ಪು ಬರೆದರೆ ಸರಸ್ವತಿಯೂ ಒಪ್ಪುವುದಿಲ್ಲ ಎಂದರು. ಪತ್ರಕರ್ತರು ಜೀವದ ಹಂಗು ತೊರೆದು ಕಠಿಣ ಸ್ಥಳಕ್ಕೆ ತೆರಳಿ ದೃಶ್ಯ ಸೆರೆ ಹಿಡಿದು ರಾಜ್ಯಕ್ಕೆ ತೋರಿಸುತ್ತಾರೆ. ಕಾರವಾರದ ಪತ್ರಕರ್ತರು ಕೊರೊನಾ, ಪ್ರವಾಹ ಸಂದರ್ಭದಲ್ಲಿ ಜನಾನುರಾಗಿ ಕೆಲಸ ಮಾಡಿದ್ದಾರೆ ಎಂದರು.

ಇನ್ನು ಬೇರೆ ಊರುಗಳಿಂದ ಬರುವ ಪತ್ರಕರ್ತರಿಗೆ ಕಾರವಾರದಲ್ಲಿ ವಸತಿ ಸಮಸ್ಯೆ ಆಗುತ್ತಿದೆ. ಹೀಗಾಗಿ ಪತ್ರಕರ್ತರಿಗೆ ಪ್ರಧಾನ ಮಂತ್ರಿ ಆವಾಸ ಯೋಜನೆ ಅಡಿ ವಸತಿ ಸೌಲಭ್ಯ ಕೊಡುವ ಪ್ರಯತ್ನ ನಡೆಯುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಪತ್ರಿಕಾ ಭವನಕ್ಕೆ ಕುರ್ಚಿಗಳನ್ನು ನೀಡುವುದಾಗಿ ಘೋಷಣೆ ಮಾಡಿದರು. ನಗರಸಭೆ ಅಧ್ಯಕ್ಷ ನಿತಿನ್ ಪಿಕಳೆ, ಎಸ್ ಪಿ ಸುಮನ್ ಪೆನ್ನೇಕರ್, ಇಒ ಪ್ರಿಯಾಂಗಾ ಎಂ, ಜಿಲ್ಲಾ ಪತ್ರಿಕಾಭವನ ನಿರ್ವಹಣಾ ಸಮಿತಿ ಅಧ್ಯಕ್ಷ ಟಿ.ಬಿ.ಹರಿಕಾಂತ ಸೇರಿದಂತೆ ಕಾರವಾರದ ಪತ್ರಕರ್ತರು ಹಾಜರಿದ್ದರು.