ಭಟ್ಕಳ: ವಾಕೋ ಇಂಡಿಯಾ ಚಿಲ್ಡ್ರನ್ ಕೆಡಿಟ್ಸ್ & ಜ್ಯೂನಿಯರ್ ನ್ಯಾಶನಲ್ ಕಿಕ್‌ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡದ ಉತ್ತರ ಕನ್ನಡ ವಿಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮೆರೆದು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ.
ಕೊಲ್ಕತ್ತಾ ಬೆಹಲಾದ ಈಸ್ಟರ್ನ ರೈಲ್ವೆ ಇಂಡೋರ್ ಸ್ಟೇಡಿಯಂನಲ್ಲಿ ಜು 19 ರಿಂದ ಜು 23 ರವರೆಗೆ ರಾಷ್ಟ್ರ ಮಟ್ಟದ ಕಿಕ್‌ಬಾಕ್ಸಿಂಗ್ ಚಾಂಪಿಯನ್‌ಶಿಪ್ ಏರ್ಪಡಿಸಲಾಗಿತ್ತು. ದೇಶದ ವಿವಿಧ ರಾಜ್ಯಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು.
ಆದ್ಯ ಸತೀಶ ಶೆಟ್ಟಿ ಬಾಲಕಿಯರ 12 ವರ್ಷ ವಯೋಮಿತಿಯ ಕ್ರಿಯೇಟಿವ್ ಫಾರ್ಮ್ ವೆಪನ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದು ಇಟಲಿಯಲ್ಲಿ ನಡೆಯುವ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.
ಬಾಲಕರ ವಿಭಾಗದಲ್ಲಿ ಮಣಿಪ್ರಸಾದ ಅಶ್ವತ ಶೆಟ್ಟಿ ಬೆಳ್ಳಿ ಪದಕ ಗಳಿಸಿದ್ದಾನೆ. ಬಾಲಕಿಯರ 9 ವರ್ಷ ವಯೋಮಿತಿಯ ಪಾಯಿಂಟ್ ಪೈಟಿಂಗ್ ವಿಭಾಗದಲ್ಲಿ ಪ್ರಣವಿ ರಾಮಚಂದ್ರ ಕಿಣಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾಳೆ. ಇನ್ನು ಭಾಗವಹಿಸಿದ ತಾಲೂಕಿನ ಕಿಕ್‌ಬಾಕ್ಸಿಂಗ್ ಪಟುಗಳಾದ ರಿಷಿಮಾ ರಾಜೇಶ ನಾಯ್ಕ, ಪ್ರಣವ ನಾರಾಯಣ ಮೊಗೇರ, ನಿಧಿ ಯಶ್ವಂತ ನಾಯ್ಕ, ಸಿಂಧು ಶಿವಾಜಿ ಅರೇರ್ 9ನೇಯ ಸ್ಥಾನವನ್ನು ಪಡೆದಿದ್ದಾರೆ. ಈ ವಿದ್ಯಾರ್ಥಿಗಳು ಭಟ್ಕಳ ಶೋಟೋಕಾನ ಕರಾಟೆ ಇನ್ಸಿಟಿಟ್ಯೂಟನಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.