ಕಾರವಾರ: ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಭಾನುವಾರ ಕಾರವಾರ ನಗರದ ಮಕ್ಕಳ ಉದ್ಯಾನದಲ್ಲಿ ಏಕಕಾಲಕ್ಕೆ 75 ಗಿಡಗಳನ್ನು ನೆಡುವುದರ ಮೂಲಕ ಪತ್ರಿಕಾ ದಿನಾಚರಣೆಗೆ ಚಾಲನೆ ನೀಡಲಾಯಿತು. ಪತ್ರಕರ್ತರು, ವಿವಿಧ ಸಂಘ, ಸಂಸ್ಥೆಗಳ ಮುಖಂಡರು, ಜನಪ್ರತಿನಿಧಿಗಳು, ಅಧಿಕಾರಿಗಳು ಗಿಡ ನೆಟ್ಟರು. ಬಳಿಕ ಪತ್ರಿಕಾ ಭವನದ ಮುಂದುವರಿದ ಕಾಮಗಾರಿಯನ್ನು ಶಾಸಕಿ ರೂಪಾಲಿ ನಾಯ್ಕ ಉದ್ಘಾಟಿಸಿದರು.
ಸೈನಿಕರಿಗೆ ಸನ್ಮಾನ
ವೇದಿಕೆ ಕಾರ್ಯಕ್ರಮದಲ್ಲಿ ಮೂವರು ಮಾಜಿ ಸೈನಿಕರಾದ ಸಂತೋಷ್ ನಾಯ್ಕ, ಗೋವಿಂದ ಗಾಂವ್ಕರ್, ರಮಾಕಾಂತ್ ಸಾವಂತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪತ್ರಿಕಾ ಭವನ ನಿರ್ಮಿಸಿದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಹರ್ಷಾ, ಸುರೇಶ್, ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದ ವಾರ್ತಾ ಇಲಾಖೆಯ ಅಪ್ರೆಂಟಿಶಿಪ್ ಸುಜಾತಾ ಜೋಡಳ್ಳಿ, ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ್ದ ಎನ್‌ಸಿಸಿ ಘಟಕದ ರೋಶನ ರಾಣೆ ಮತ್ತು ವೇದಿಕೆ ಮೇಲಿದ್ದ ಎಲ್ಲ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಟ್ಯಾಗೋರ್ ಪತ್ರಿಕಾ ಪ್ರಶಸ್ತಿ ಪ್ರದಾನ
ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಿಕಾ ದಿನಾಚರಣೆಯಂದು ನೀಡುವ ಟ್ಯಾಗೋರ್ ಪತ್ರಿಕಾ ಪ್ರಶಸ್ತಿಗೆ ಮೂವರು ಪತ್ರಕರ್ತರು ಭಾಜನರಾಗಿದ್ದಾರೆ. ವಿಜಯವಾಣಿಯ ಹಿರಿಯ ವರದಿಗಾರ ಸುಭಾಷ ದೂಪದಹೊಂಡ, ಕನ್ನಡ ಪ್ರಭ ಹುಬ್ಬಳ್ಳಿ ವರದಿಗಾರ ಮಯೂರ ಹೆಗಡೆ, ಪಬ್ಲಿಕ್ ಟಿವಿ ಕ್ಯಾಮೆರಾಮನ್ ಸುರೇಂದ್ರ ಕುಡಾಳಕರ್‌ಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.