ಕ್ಯಾಚ್​ ಕ್ಯಾಚ್​; ನಿರಾಶ್ರಿತ ಮಕ್ಕಳೊಂದಿಗೆ ಚೆಂಡಾಟವಾಡಿದ ಸಾಕುನಾಯಿ

ಮಕ್ಕಳಾಗಲಿ, ಪ್ರಾಣಿಗಳಾಗಲಿ ಇವರು ತನ್ನವರು ಅವರು ಪರರು ಎಂಬ ಭೇದಭಾವ ಎಳ್ಳಷ್ಟೂ ಮಾಡಲಾರವು. ತಮ್ಮೊಂದಿಗೆ ಯಾರು ನಗುಮುಖದಿಂದ ಮಾತನಾಡುತ್ತಾರೆ, ಆಟವಾಡಿಸುತ್ತಾರೆ ಅವರೆಡೆ ಅನಾಯಾಸವಾಗಿ ಸ್ನೇಹಭಾವದಿಂದ ಒಡನಾಡುತ್ತವೆ. ಪುಟ್ಟಜೀವಗಳ ಅಸ್ತಿತ್ವವೇ ಸರಳತೆ ಮತ್ತು ಮುಗ್ಧತೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ಗಮನಿಸಿ. ನಿರಾಶ್ರಿತ ಮಕ್ಕಳು ಈ ಮನೆಯ ಸಾಕುನಾಯಿಯೊಂದಿಗೆ (Dog) ಚೆಂಡಾಟವಾಡುತ್ತಿದ್ಧಾರೆ. ನಾಯಿ ಕೂಡ ಎಷ್ಟು ಉಲ್ಲಾಸದಿಂದ ಅವರೊಂದಿಗೆ ಸ್ಪಂದಿಸುತ್ತಿದೆ ನೋಡಿ.

ಈ ಮಕ್ಕಳು ಚೆಂಡು ಎಸೆದಾಗ ಪ್ರತೀ ಬಾರಿಯೂ ಅದು ಬಾಯಿಯಿಂದ ಚೆಂಡನ್ನು ಹಿಡಿಯುತ್ತದೆ. ನಂತರ ಅವರತ್ತ ಎಸೆಯುತ್ತದೆ. ಪರಸ್ಪರ ಕುಣಿದಾಡುತ್ತ ಈ ಆಟವನ್ನು ನಾಯಿಯೊಂದಿಗೆ ಅವರೆಲ್ಲ ಆನಂದಿಸುತ್ತಾರೆ. ಸುಮಾರು 10 ಲಕ್ಷ ಜನರು ಈ ವಿಡಿಯೋ ನೋಡಿದ್ದರು. 90,000 ಜನರು ಇದನ್ನು ಇಷ್ಟಪಟ್ಟಿದ್ದರು.

ಮೊದಲಿಗೆ ಈ ಹುಡುಗಿಯೊಂದೇ ನಾಯಿಯ ಸ್ನೇಹ ಬೆಳೆಸಿದೆ. ನಂತರ ತನ್ನೊಂದಿಗೆ ಇನ್ನಷ್ಟು ಮಕ್ಕಳನ್ನು ಕರೆದುಕೊಂಡು ಬಂದಿದೆ. ಹೀಗೆ ಈ ಮಕ್ಕಳು ಮತ್ತು ನಾಯಿಯ ಮಧ್ಯೆ ಮಧುರವಾದ ಸ್ನೇಹ ಅರಳಿದೆ. ಆಪ್ತವಾದ ಈ ವಿಡಿಯೋಗಳನ್ನು ನೋಡಿದ ಅನೇಕರು ಮನದುಂಬಿ ಪ್ರತಿಕ್ರಿಯಿಸಿದ್ದಾರೆ. ನಾಯಿಗಳಾಗಲೀ, ಮಕ್ಕಳಾಗಲೀ ಎಂದೂ ನಿಮ್ಮ ಆರ್ಥಿಕ ಸ್ಥಿತಿಯಿಂದ ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸಲಾರವು. ಈ ಮಕ್ಕಳಿಗೂ ನಾಯಿಗೂ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ ಹಲವಾರು ಜನ. ಮುಗ್ಧಜೀವಗಳಿಗೆ ಪ್ರೀತಿಯೊಂದೇ ಸೇತುವೆ. ನೀವೇನಂತೀರಿ?