ಶಾಲಾ ಆವರಣದಲ್ಲಿ ಬೆಳೆದ ವಿಷಕಾರಿ ಬೀಜ ತಿಂದು ಹಳಿಯಾಳ ತಾಲೂಕಿನ ಗುಂಡೊಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ 11 ಮಕ್ಕಳು ಅಸ್ವಸ್ಥರಾದ ಘಟನೆ ನಡೆದಿದೆ. ಶಾಲೆಯ ಆವರಣದಲ್ಲಿ ಬೆಳೆದಿದ್ದ, ಕಾಡಿನ ಗಿಡದ ಬೀಜ ತಿಂದ 1, 2 ಮತ್ತು 3ನೇ ತರಗತಿಯ ಒಟ್ಟು 11 ವಿದ್ಯಾರ್ಥಿಗಳು ಸೋಮವಾರ ಸಂಜೆ ಶಾಲೆ ಮುಗಿಸಿ ಮನೆಗೆ ಹೋದ ನಂತರ ವಾಂತಿ ಬೇದಿ ಪ್ರಾರಂಭವಾಗಿ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಪೋಷಕರು ಮಕ್ಕಳನ್ನು ಕಾಳಗಿನಕೊಪ್ಪದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಹಳಿಯಾಳ ಪಟ್ಟಣದಲ್ಲಿರುವ ತಾಲ್ಲೂಕು ಆಸ್ಪತ್ರೆಗೆ ಸೇರಿಸಿದ್ದಾರೆ..
ವೈದ್ಯರಾದ ಡಾ.ಗಣೇಶ್ ಅರಸಿನಗೇರಿಯವರು ಅಸ್ವಸ್ಥಗೊಂಡಿದ್ದ ಎಲ್ಲ ಮಕ್ಕಳಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆಯನ್ನು ನೀಡಿ ಗುಣಪಡಿಸಿದ್ದಾರೆ. ಮಕ್ಕಳ ಆರೋಗ್ಯ ಸ್ಥಿರವಾದ ನಂತರ ಮಧ್ಯಾಹ್ನ ಎಲ್ಲಾ ಮಕ್ಕಳನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಿಕೊಡಲಾಗಿದೆ. ಡಾ.ಅನಿಲ್ ಕುಮಾರ್ ನಾಯ್ಕ ಮತ್ತು ಡಾ.ರಮೇಶ್ ಕದಂ ಮಾರ್ಗದರ್ಶನದಲ್ಲಿ ಡಾ.ಗಣೇಶ್ ಅರಸಿನಗೇರಿಯವರ ನೇತೃತ್ವದ ತಾಲ್ಲೂಕು ಆಸ್ಪತ್ರೆಯ ಸಿಬ್ಬಂದಿಗಳ ತಂಡ ಅಸ್ವಸ್ಥಗೊಂಡ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಿದೆ.
ತಾಲ್ಲೂಕು ಆಸ್ಪತ್ರೆಗೆ ಸಿಪಿಐ ಸುರೇಶ್ ಶಿಂಗೆ, ಪಿಎಸೈ ವಿನೋದ್ ಕುಮಾರ್ ಎಸ್.ಕೆ, ಅಪರಾಧ ವಿಭಾಗದ ಪಿಎಸೈ ಅಮೀನ್ ಸಾಬ್ ಅತ್ತಾರ್, ಶಾಲಾ ಶಿಕ್ಷಕ ವೃಂದದವರು ಮತ್ತು ಶಾಲಾಭಿವೃದ್ದಿ ಸಮಿತಿಯ ಪದಾಧಿಕಾರಿಗಳು ಹಾಗೂ ಚಾಲಕರು ಭೇಟಿ ನೀಡಿದ್ದರು…
ಸಂದೇಶ್ ಜೈನ್, ನುಡಿ ಸಿರಿ ನ್ಯೂಸ್, ಹಳಿಯಾಳ