ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಭವ್ಯ ರಾಮಮಂದಿರದಲ್ಲಿ ಮುಂದಿನ ವರ್ಷ ಮಕರ ಸಂಕ್ರಮಣದ ದಿನ ಅಂದರೆ ಜ.14ರಂದು ರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂದು ರಾಮ ಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಮಂಗಳವಾರ ಹೇಳಿದ್ದಾರೆ.
ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುತ್ತದೆ. ಪ್ರತಿಷ್ಠಾಪನೆಯ ವಿಧಿವತ್ತಾದ ಆಚರಣೆಗಳು 10 ದಿನಗಳ ಕಾಲ ನಡೆಯಲಿವೆ. ಈ ಕಾರ್ಯಕ್ರಮವನ್ನು ದೇಶ ಹಾಗೂ ವಿದೇಶದಲ್ಲಿ ಪ್ರಸಾರ ಮಾಡುವುಕ್ಕಾಗಿಯೂ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ದೇವಸ್ಥಾನದ ಮಾದರಿಯನ್ನು ವಿವರಿಸಿದ ಅವರು, ಅಕ್ಟೋಬರ್ ವೇಳೆಗೆ ದೇವಸ್ಥಾನದ ನೆಲಮಹಡಿ ನಿರ್ಮಾಣ ಕಾರ್ಯ ಪೂರ್ಣವಾಗಲಿದೆ. ನಾಲ್ಕು ಅಂತಸ್ತುಗಳು ನಿರ್ಮಾಣವಾದ ಬಳಿಕ ಇಲ್ಲಿ ‘ರಾಮಕಥಾ’ವನ್ನು ರಚನೆ ಮಾಡಲಾಗುವುದು. 360 ಅಡಿ ಅಗಲ ಮತ್ತು 235 ಅಡಿ ಉದ್ದ ಹೊಂದಿರುವ ದೇವಸ್ಥಾನ ನೆಲಮಹಡಿಯಲ್ಲಿ 160 ಕಾಲಮ್‌ಗಳು, ಮೊದಲ ಮಹಡಿಯಲ್ಲಿ 132 ಕಾಲಮ್‌ಗಳು ಮತ್ತು 2ನೇ ಮಹಡಿಯಲ್ಲಿ 74 ಕಾಲಮ್‌ಗಳನ್ನು ಹೊಂದಿರಲಿದೆ. ಇದರೊಂದಿಗೆ 5 ಮಂಟಪಗಳು ಇರಲಿವೆ ಎಂದು ಹೇಳಿದರು.
ದೇವಸ್ಥಾನದ ನಿರ್ಮಾಣಕ್ಕೆ ರಾಜಸ್ಥಾನದಿಂದ ತಂದಿರುವ 4 ಲಕ್ಷ ಕ್ಯುಬಿಕ್ ಅಡಿಯಷ್ಟು ಕಲ್ಲು ಮತ್ತು ಮಾರ್ಬಲ್‌ಗಳನ್ನು ಬಳಕೆ ಮಾಡಿ ಗರ್ಭಗುಡಿಯ ಮೇಲೆ ಇರುವ 161 ಅಡಿ ಎತ್ತರದ ಗೋಪುರವನ್ನು ನಿರ್ಮಾಣ ಮಾಡಲಾಗುವುದು. ಗೋಪುರದ ನಿರ್ಮಾಣಕ್ಕೆ ಯಾವುದೇ ಉಕ್ಕು ಅಥವಾ ಇಟ್ಟಿಗೆಯನ್ನು ಬಳಸಲಾಗುವುದಿಲ್ಲ. ಇಡೀ ದೇಗುವ ನಾಗರ ಶೈಲಿಯಲ್ಲಿ ನಿರ್ಮಾಣವಾಗುತ್ತಿದ್ದು, 46 ಮರದ ಬಾಗಿಲುಗಳನ್ನು ಅಳವಡಿಸಲಾಗುತ್ತದೆ. ಗರ್ಭಗುಡಿ ಮಾತ್ರ ಚಿನ್ನ ಲೇಪಿತ ಬಾಗಿಲನ್ನು ಹೊಂದಿರಲಿದೆ ಎಂದು ಹೇಳಿದರು.