ಅಂಕೋಲಾ, ಜೂನ್ ೨೦: ‘ಅಂಕೋಲೆಗೆ ಐದು ಸಾವಿರ ವರ್ಷಗಳಿಗೂ ಹೆಚ್ಚಿನ ಅವಧಿಯ ಇತಿಹಾಸವಿದೆ. ಇಲ್ಲಿನ ಬೇಲೆಕೇರಿಯಲ್ಲಿ ಸಿಕ್ಕಿರುವ ಸೂಕ್ಷ್ಮ ಶಿಲಾಯುಗದ ನೆಲೆ ಮತ್ತು ಬೋಳೆಯಲ್ಲಿ ದೊರೆತಿರುವ ರೊಕ್ ಆರ್ಟ್ ಅಲ್ಲದೇ ಅಡ್ಲೂರು, ಕೊಡ್ಸಣಿಗಳಲ್ಲಿ ದೊರೆತ ಶಿಲಾಯುಗ ಕಾಲದ ಅವಶೇಷಗಳು ಇದನ್ನು ದೃಢೀಕರಿಸುತ್ತವೆ. ಅದೇರೀತಿ ಬೊಳೆಯಲ್ಲಿ ದೊರೆತ ನಾಲ್ಕು ಅಡಿ ಉದ್ದದ ಶಿವಲಿಂಗ ಮತ್ತು ಇಟ್ಟಿಗೆ ದೇವಾಲಯದ ತಳಪಾಯ ಕ್ರಿಸ್ತ ಶಕ ಒಂದನೇ ಶತಮಾನದ್ದಾಗಿದ್ದು ಆ ಕಾಲದಲ್ಲಿಯೇ ಅಂಕೋಲೆಯಲ್ಲಿ ಉತ್ತಮವಾದ ಸಾಂಸ್ಕೃತಿಕ ಜೀವನ ಸಂಘಟಿತವಾಗಿತ್ತು’ ಎಂದು ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಅಂಕೋಲಾ ಹೇಳಿದರು. ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಅಂಕೋಲಾ ಘಟಕದವರು ಪಿ.ಎಮ್. ಜ್ಯೂನಿಯರ್ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ‘ಅಂಕೋಲೆಯ ಪ್ರಾದೇಶಿಕ ಇತಿಹಾಸ’ ವಿಷಯದ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕಾರರಾಗಿ ಆಗಮಿಸಿ ಮಾತನಾಡಿದರು.
ಗೌಡರು, ಶಿಲಾ ಸಂಸ್ಕೃತಿಯ ಕಾಲದಿಂದ ಕ್ರಿ.ಶ. 1800ರ ವರೆಗಿನ ಅವಧಿಯ ಅಂಕೋಲೆಯ ಚರಿತ್ರೆಯನ್ನು ಪ್ರಾಗೈತಿಹಾಸಿಕ ಹಾಗೂ ಶಾಸನಗಳ ಬೆಂಬಲದೊಂದಿಗೆ ವಿಸ್ತಾರವಾಗಿ ವಿವರಿಸಿದರು. ಅಂಕೋಲೆಯಲ್ಲಿ ಬನವಾಸಿ ಕದಂಬರ ಆಡಳಿತದ ಕುರುಹುಗಳು. ಭೋಜ ಅರಸರ ಕುರಿತು, ಕಲ್ಯಾಣ ಚಾಲುಕ್ಯರ ಅವಧಿಯಲ್ಲಿದ್ದ ಕದಂಬ ವಂಶಸ್ಥ ಅಧಿಕಾರಿಗಳ ಬಗ್ಗೆ, ಚಾರಿತ್ರಿಕ ಅಂಕೋಲೆ ನಾಡಿನ ಗಡಿಗಳ ಕುರಿತು, ಗೋವೆ, ಚಂದಾವರ ಮತ್ತು ಹಾನುಗಲ್ಲು ಕಾದಂಬರ ನಡುವಿನ ವ್ಯತ್ಯಾಸಗಳು, ಚಂದಾವರದ ಕಾದಂಬ ಅರಸರು ವಿಜಯನಗರವನ್ನು ವಿರೋಧಿಸಿದ ಕುರಿತು ಇತ್ಯಾದಿ ಅಂಕೋಲೆಯ ಇತಿಹಾಸಕ್ಕೆ ಸಂಬಂಧಿಸಿದ ಸಂಗತಿಗಳ ಕುರಿತು ಅಧಿಕಾರಯುತವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿಡ ಕಸಾಪದ ಅಂಕೋಲಾ ಘಟಕಾಧ್ಯಕ್ಷ ಗೋಪಾಲಕೃಷ್ಣ ನಾಯಕ ಅವರು ಮಾತನಾಡಿ ಸ್ಥಳಿಯ ಚರಿತ್ರೆ ತಿಳಿದುಕೊಂಡು ನಮ್ಮ ಪರಂಪರೆಯನ್ನು ಅರಿಯಬೇಕು. ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಲ್ಲಿರುವ ಚಾರಿತ್ರಿಕ ಅವಶೇಷಗಳನ್ನು ಹುಡುಕಿ ತಜ್ಞರ ಮಾರ್ಗದರ್ಶನ ಪಡೆದು ಅವುಗಳ ಮಹತ್ವವನ್ನು ತಿಳಿದುಕೊಂಡು ಸಂರಕ್ಷಿಸುವತ್ತ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆನೀಡಿದರು.
ಉಪನ್ಯಾಸಕ ಶ್ರೀ ಉಲ್ಲಾಸ ಹುದ್ದಾರ ಅವರು ಪ್ರಾಸ್ಥಾವಿಕ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರೆ, ಪ್ರಭಾರಿ ಪ್ರಾಚಾರ್ಯರಾದ ಫಾಲ್ಗುಣ ಗೌಡ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಕಸಾಪದ ಅಂಕೋಲಾ ಘಟಕದ ಕಾರ್ಯದರ್ಶಿಗಳಾದ ಜಗದೀಶ್ ನಾಯಕ ಹೊಸ್ಕೇರಿ ಅವರು ಅಂಕೋಲೆ ಚರಿತ್ರೆಯ ಕುರಿತು ಶ್ಯಾಮಸುಂದರ ಗೌಡರ ಅಧ್ಯಯನ ಶ್ರಮದ ಕುರಿತು ವಿವರಿಸಿ, ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ವಂದಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಂಸ್ಕೃತಿ ಚಿಂತಕ ನಂದನ ಐಗಳ, ಕಡಲ ವಿಜ್ಞಾನಿ ವಿ.ಎನ್. ನಾಯಕ, ವಿಶ್ರಾಂತ ಪ್ರಾಚಾರ್ಯ ರವೀಂದ್ರ ಕೇಣಿ, ವಿಶ್ರಾಂತ ಗ್ರಂಥಪಾಲಕ ಮಹಾಂತೇಶ ರೇವಡಿ, ಹೊನ್ನಮ್ಮಾ ನಾಯಕ, ಪುಷ್ಪಾ ನಾಯ್ಕ, ನಿರುಪಮಾ ಅಂಕೋಲೆಕರ, ರೇಷ್ಮಾ ನಾಯ್ಕ ನಾಟಕಕಾರ ಸುಜೀತ್ ನಾಯ್ಕ ಹಾರವಾಡ, ಡಾ. ಕರುಣಾಕರ ನಾಯ್ಕ ಮೊದಲಾದ ಗಣ್ಯರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.