‘ಸರ್ಕಾರಕ್ಕೆ ಬಿಟ್ಟಿದ್ದು’; ಮತ್ತೆ ಅಡ್ಡ ಗೋಡೆಯ ಮೇಲೆ ದೀಪವಿಟ್ಟ ಪಾಕ್ ಕ್ರಿಕೆಟ್ ಮಂಡಳಿ

ಏಷ್ಯಾಕಪ್‌ನ ವೇಳಾಪಟ್ಟಿ ಅಂತಿಮಗೊಂಡ ಬಳಿಕ ಭಾರತ ಹಾಗೂ ಪಾಕ್ ಕ್ರಿಕೆಟ್ ಮಂಡಳಿಗಳ ನಡುವಿನ ಶೀತಲ ಸಮರ ಅಂತ್ಯಗೊಂಡಿದೆ ಎಂತಲೇ ಭಾವಿಸಲಾಗಿತ್ತು. ಹೀಗಾಗಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಪಾಕ್ ತಂಡ ಭಾಗವಹಿಸಲಿದೆ ಎಂದು ಎಲ್ಲರು ಭಾವಿಸಿದ್ದರು. ಆದರೆ ಇದೀಗ ಪಾಕ್ ಪಾಲ್ಗೊಳ್ಳುವಿಕೆಯ ಬಗ್ಗೆ ಮಾತನಾಡಿರುವ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜಮ್ ಸೇಥಿ, ಪಾಕ್ ಸರ್ಕಾರದ ತೀರ್ಮಾನದ ಮೇಲೆ ಅವಲಂಭಿತವಾಗಿದೆ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿದ ಪಿಸಿಬಿ ಮುಖ್ಯಸ್ಥ ನಜಮ್ ಸೇಥಿ, ಏಕದಿನ ವಿಶ್ವಕಪ್ ಆಡಲು ಭಾರತಕ್ಕೆ ಬರುವುದು ಪಾಕಿಸ್ತಾನ ಸರ್ಕಾರದ ನಿರ್ಧಾರವಾಗಿರುತ್ತದೆ ಎಂದಿದ್ದಾರೆ. ವಿಶ್ವಕಪ್ ವೇಳಾಪಟ್ಟಿಯನ್ನು ಪ್ರಕಟಿಸಲು ತಯಾರಿ ನಡೆಸಿರುವ ಐಸಿಸಿಗೆ, ಪಿಸಿಬಿಯ ಈ ಹೇಳಿಕೆ ಮತ್ತಷ್ಟು ಸಂಕಷ್ಟವನ್ನು ತಂದೊಡ್ಡಿದೆ.

ಮುಂದುವರೆದು ಮಾತನಾಡಿದ ನಜಮ್ ಸೇಥಿ, ಭಾರತ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಅಥವಾ ಪಿಸಿಬಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನಿರ್ಧಾರ ಸರ್ಕಾರದ್ದು. ನಾವು ಭಾರತಕ್ಕೆ ಹೋಗುವುದು ಮತ್ತು ಆಡುವ ಅಂತಿಮ ನಿರ್ಧಾರವು ಪಾಕಿಸ್ತಾನದ ಸರ್ಕಾರದ್ದಾಗಿರುತ್ತದೆ. ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗಬೇಕೇ ಅಥವಾ ಬೇಡವೇ ಎಂಬುದನ್ನು ಭಾರತ ಸರ್ಕಾರ ಹೇಗೆ ನಿರ್ಧರಿಸುತ್ತದೆಯೋ ಅದೇ ರೀತಿ ನಾವು ಭಾರತಕ್ಕೆ ಹೋಗಿ ಆಡಬೇಕೇ ಅಥವಾ ಬೇಡವೇ ಎಂಬುದು ಪಾಕಿಸ್ತಾನ ಸರ್ಕಾರದ ನಿರ್ಧಾರವಾಗಿರುತ್ತದೆ ಎಂದಿದ್ದಾರೆ.

ಇನ್ನು ಅಹಮದಾಬಾದ್‌ನಲ್ಲಿ ಪಾಕಿಸ್ತಾನ ಆಡುವ ಪ್ರಶ್ನೆಗೆ ಉತ್ತರಿಸಿದ ಪಿಸಿಬಿ ಅಧ್ಯಕ್ಷರು, ನಾವು ವಿಶ್ವಕಪ್ ಆಡಲು ಭಾರತಕ್ಕೆ ಹೋಗುತ್ತಿದ್ದೇವೆಯೇ ಅಥವಾ ಇಲ್ಲವೇ ಎಂಬುದನ್ನು ಮೊದಲು ಅಂತಿಮಗೊಳಿಸಬೇಕು. ಇದು ಮುಗಿದ ನಂತರ, ನಾವು ಅಹಮದಾಬಾದ್‌ನಲ್ಲಿಯೂ ಆಡುವ ಬಗ್ಗೆ ನಿರ್ಧರಿಸುತ್ತೇವೆ. ಐಸಿಸಿಯ ಹಿರಿಯ ಅಧಿಕಾರಿಗಳು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾಗ ತನ್ನ ಉದ್ದೇಶದ ಬಗ್ಗೆ ತಿಳಿಸಿದ್ದೆ ಎಂದು ನಜಮ್ ಸೇಥಿ ಹೇಳಿದ್ದಾರೆ.

ಸದ್ಯ ಏಷ್ಯಾಕಪ್ ವೇಳಾಪಟ್ಟಿಯನ್ನು ಅಂತಿಮಗೊಳಿಸಿರುವ ಪಾಕ್ ಮಂಡಳಿ, ಈ ಕ್ರೀಡಾಕೂಟವನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಮುಂದಾಗಿದೆ. ಇದರ ಪ್ರಕಾರ 4 ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿದ್ದು, 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಭಾರತ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ರವರೆಗೆ ಈ ಪಂದ್ಯಾವಳಿ ನಡೆಯಲಿದೆ.