ಕರ್ನಾಟಕ ಎಫೆಕ್ಟ್ ದಿಲ್ಲಿ ಮೇಲೂ ಆಗುತ್ತಾ?

ಬೆಂಗಳೂರು(ಜೂ.17):  ಸ್ಥಳೀಯ ಆರ್‌ಎಸ್‌ಎಸ್‌ ನಾಯಕರು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ 4 ಹೆಸರು ಪರಿಗಣಿಸುವಂತೆ ಹೇಳಿದ್ದು, ಬೊಮ್ಮಾಯಿ, ಬಸನಗೌಡ ಯತ್ನಾಳ, ಆರ್‌.ಅಶೋಕ್‌ ಮತ್ತು ಸುನೀಲ್‌ ಕುಮಾರ್‌ ಹೆಸರುಗಳು ಪರಿಗಣನೆಯಲ್ಲಿವೆ. ರಾಜ್ಯ ಅಧ್ಯಕ್ಷರು ಯಾರು ಎಂಬ ಬಗ್ಗೆ ಕೂಡ ಬಿಜೆಪಿ ಹೈಕಮಾಂಡ್‌ ನಿರ್ಣಯ ತೆಗೆದುಕೊಳ್ಳಬೇಕಿದ್ದು, ಶೋಭಾ ಕರಂದ್ಲಾಜೆ, ಸಿ.ಟಿ.ರವಿ, ಅಶ್ವತ್ಥನಾರಾಯಣ ಮತ್ತು ಸುನೀಲ್‌ ಕುಮಾರ್‌ ಹೆಸರುಗಳ ಬಗ್ಗೆ ಚರ್ಚೆ ಆಗುತ್ತಿದೆ.

ಈಗಿನ ದಿನಗಳಲ್ಲಿ ಒಂದು ರಾಜ್ಯದ ಚುನಾವಣೆ ಫಲಿತಾಂಶ ಪಕ್ಕದ ರಾಜ್ಯಗಳಲ್ಲಿ ಜನರ ಮೇಲೆ ಕೂಡ ಪರಿಣಾಮ ಬೀರುವುದಿಲ್ಲ. ಹೌದು, ಆದರೆ ರಾಜಕೀಯ ಗೆಲುವು ಇರಲಿ ಅಥವಾ ಸೋಲು ಬರಲಿ ಅದಕ್ಕೊಂದು ಸಾಂಕ್ರಾಮಿಕತೆಯ ಸ್ವರೂಪ ಇರುತ್ತದೆ. ಬಹುತೇಕ ಕರ್ನಾಟಕದ ಒಂದು ಸೋಲು ಯಾವಾಗಲೂ ಗೆದ್ದೇ ಗೆಲ್ಲುತ್ತೇವೆ ಎಂಬ ಅಹಮಿಕೆಯಲ್ಲಿದ್ದ ಬಿಜೆಪಿಯ ಪ್ರತಿಷ್ಠೆಗೆ ಪೆಟ್ಟು ನೀಡಿದ್ದರೆ, ಸತತವಾಗಿ ಸೋಲು ಸೋಲು ಎಂದು ಮೂದಲಿಸಿಕೊಳ್ಳುತ್ತಿದ್ದ ಕಾಂಗ್ರೆಸ್‌ ಪಾರ್ಟಿಗೆ ಸರಿಯಾಗಿ ಯುದ್ಧ ಮಾಡಿದರೆ ನಾವು ಕೂಡ ಗೆಲ್ಲಬಹುದು ಎಂಬ ಅರಿವು ಮೂಡಿಸಿದೆ. ಕರ್ನಾಟಕದ ಚುನಾವಣಾ ಫಲಿತಾಂಶ ಎರಡು ರಾಷ್ಟ್ರೀಯ ಪಾರ್ಟಿಗಳ ಕಾರ್ಯಕರ್ತರ ಮತ್ತು ನಾಯಕರ ಮನಸ್ಸಿನ ಮೇಲೆ ಪರಿಣಾಮ ಬೀರುವುದು ಹೌದಾದರೂ ಕೂಡ ಉಳಿದ ರಾಜ್ಯಗಳ ಮತದಾರರ ಮೇಲೇನೂ ಪರಿಣಾಮ ಬೀರುತ್ತದೆ ಎಂದು ಅನ್ನಿಸುತ್ತಿಲ್ಲ. ಇಲ್ಲಿನಂತೆ ಉಳಿದ ಕಡೆಗಳಲ್ಲೂ ಸ್ಥಳೀಯ ವಿಷಯಗಳು, ಅಲ್ಲಿನ ಸರ್ಕಾರಗಳು ಕೆಲಸ ಮಾಡಿರುವ ರೀತಿ ನೀತಿಗಳ ಮೇಲೆಯೇ ವಿಧಾನಸಭಾ ಚುನಾವಣೆಗಳು ನಡೆಯುವ ಸಾಧ್ಯತೆ ಹೆಚ್ಚು. ಇವತ್ತಿನ ವರ್ತಮಾನದ ಪ್ರಕಾರ ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಆಡಳಿತ ವಿರೋಧಿ ಅಲೆಯ ಚಿಂತೆ ಇದ್ದರೆ, ರಾಜಸ್ಥಾನದಲ್ಲಿ ಕಾಂಗ್ರೆಸ್‌ ವಿರುದ್ಧ ಜನಾಭಿಪ್ರಾಯ ಇದೆ. ಆದರೆ ಛತ್ತೀಸ್‌ಗಢದ ಕಾಂಗ್ರೆಸ್‌ ಸರ್ಕಾರದ ಬಗ್ಗೆ ಹೇಳಿಕೊಳ್ಳುವಂಥ ಅಸಮಾಧಾನವೂ ಇಲ್ಲ, ಅಲ್ಲಿ ಬಿಜೆಪಿ ಬಳಿ ಕೂಡ ನಾಯಕತ್ವ ಇಲ್ಲ. ಇನ್ನು ಕರ್ನಾಟಕ ಗೆದ್ದಿದ್ದರೆ ತೆಲಂಗಾಣದಲ್ಲಿ ಬಿಜೆಪಿಗೆ ಸ್ವಲ್ಪ ಲಾಭ ಆಗುತ್ತಿತ್ತು. ಈಗ ಆ ಸಾಧ್ಯತೆ ಕಡಿಮೆ. ಆದರೆ ಬಿಜೆಪಿಯ ಚಿಂತೆ ವಿಧಾನಸಭಾ ಚುನಾವಣೆಗಳು ಅಲ್ಲ, 2024ರ ಲೋಕಸಭಾ ಚುನಾವಣೆ. ಒಂದು ವೇಳೆ ರಾಷ್ಟ್ರೀಯ ವಿಚಾರಗಳ ಮೇಲೆ ಹಾಗೂ ಮೋದಿ ಹೆಸರಿನ ಮೇಲೆ ಚುನಾವಣೆ ನಡೆದರೆ ಬಿಜೆಪಿಗೆ ಲಾಭ. ಬದಲಾಗಿ, ಲೋಕಸಭೆ ಕೂಡ ಸ್ಥಳೀಯವಾಗಿ ರಾಜ್ಯಗಳಲ್ಲಿನ ಸ್ಥಿತಿಗತಿ ಮೇಲೆ ನಡೆದರೆ ವಿಪಕ್ಷಗಳಿಗೆ ಲಾಭ. ಹೀಗಾಗಿ ಬಿಜೆಪಿ ಕಾಂಗ್ರೆಸ್‌ ಅನ್ನು 100ರ ಗಡಿ ದಾಟದಂತೆ ನೋಡಿಕೊಳ್ಳಲು ತಂತ್ರ ರೂಪಿಸುತ್ತಿದ್ದರೆ, ಕಾಂಗ್ರೆಸ್‌ ಬಿಜೆಪಿಯನ್ನು ಹೇಗಾದರೂ ಮಾಡಿ ಮ್ಯಾಜಿಕ್‌ ನಂಬರ್‌ ದಾಟದಂತೆ ಕಟ್ಟಿಹಾಕಲು ಪ್ರತಿತಂತ್ರ ರೂಪಿಸುತ್ತಿದೆ. ಇವತ್ತಿನ ಸ್ಥಿತಿ ನೋಡಿದರೆ 2024ರಲ್ಲಿ ಹೀಗೆ ಆಗುತ್ತದೆ ಎಂದು ಹೇಳುವುದು ಅವಸರವಾದೀತು.