ಜಬಲ್‌ಪುರ: ಬಡವರಿಗಾಗಿ ಸರ್ಕಾರ ಅನೇಕ ಆರೋಗ್ಯ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಆದರೆ ಅದೆಷ್ಟೇ ಸೌಲಭ್ಯವಿದ್ದರೂ ಅದೆಷ್ಟೋ ಬಾರಿ ಸಂಕಷ್ಟದಲ್ಲಿರುವ ಬಡವರಿಗೆ ಈ ಸೌಲಭ್ಯ ಸಮರ್ಪಕವಾಗಿ ಸಿಗುವುದೇ ಇಲ್ಲ. ಬಡವರು ಕೇವಲ ಚಿಕಿತ್ಸೆಗಾಗಿ ಮಾತ್ರವಲ್ಲ, ಸತ್ತ ನಂತರ ಮೃತದೇಹವನ್ನು ಸಾಗಿಸಲು ಸಹ ಒದ್ದಾಡಬೇಕಾಗುತ್ತದೆ. ಅದೆಷ್ಟೋ ಬಾರಿ ಮನೆ ಮಂದಿ, ಕುಟುಂಬ ಸದಸ್ಯರ ಮೃತದೇಹವನ್ನು ಹೊತ್ತುಕೊಂಡೇ ಹೋದ ಹಲವು ಘಟನೆಗಳು ನಡೆದಿವೆ. ಕೆಲವೆಡೆ ತಳ್ಳುಗಾಡಿಯಲ್ಲಿ ಹಾಕಿಕೊಂಡು ಮೃತದೇಹವನ್ನು ಕೊಂಡೊಯ್ಯುತ್ತಾರೆ. ಆಸ್ಪತ್ರೆ ಸಿಬ್ಬಂದಿ ಆಂಬುಲೆನ್ಸ್ ಕೊಡಲು ನಿರಾಕರಿಸಿದ ಕಾರಣ ಜನರು ಅನಿವಾರ್ಯವಾಗಿ ಹೀಗೆ ಮಾಡಬೇಕಾಗುತ್ತದೆ. ಹಾಗೆಯೇ ಇಲ್ಲೊಂದೆಡೆ, ತಂದೆ ತನ್ನ ಮಗುವಿನ ಮೃತದೇಹವನ್ನು ಆಸ್ಪತ್ರೆಯ ಆಂಬ್ಯುಲೆನ್ಸ್ ಸಿಗದೆ ಚೀಲದಲ್ಲಿ ಹಾಕಿ ಕೊಂಡೊಯ್ದಿದ್ದಾರೆ.
ಈ ಘಟನೆ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ನಡೆದಿದೆ. ಬುಡಕಟ್ಟು ಜನಾಂಗದ ಸುನೀಲ್ ಧುರ್ವೆ ಮತ್ತು ಪತ್ನಿ ಜುಮ್ನಿಬಾಯಿ ಜಬಲ್ ಪುರ್‌ನ ವೈದ್ಯಕೀಯ ಕಾಲೇಜಿನಲ್ಲಿ ಮಗುವೊಂದಕ್ಕೆ ಜನ್ಮ ನೀಡಿದ್ದಾರೆ. ನವಜಾತ ಮಗು ಅನಾರೋಗ್ಯಕ್ಕೆ ಒಳಗಾಗಿತ್ತು. ಹೆಚ್ಚಿನ ಚಿಕಿತ್ಸೆ ಕೊಟ್ಟರೂ ಮಗು ಬದುಕುಳಿಯಲ್ಲಿಲ್ಲ. ಆದರೆ ದಂಪತಿಗಳ ಬಳಿ ಮಗುವಿನ ಮೃತದೇಹವನ್ನು ಆಂಬುಲೆನ್ಸ್‌ನಲ್ಲಿ ತೆಗೆದುಕೊಂಡು ಹೋಗಲು ದುಡ್ಡಿರಲಿಲ್ಲ. ಹೀಗಾಗಿ ನತದೃಷ್ಟ ತಂದೆ, ನವಜಾತ ಶಿಶುವನ್ನು ಚೀಲದಲ್ಲಿಟ್ಟುಕೊಂಡು 150 ಕಿ.ಮೀ ಪ್ರಯಾಣಿಸಿದರು.
ಒ೦ದು ಕಡೆ ಮಗುವನ್ನ ಉಳಿಸಿಕೊಳ್ಳಲಾಗಲಿಲ್ಲ ಅನ್ನೊ ನೋವು. ಇನ್ನೊಂದು ಕಡೆ ಮಗುವಿನ ಮೃತ ದೇಹ ಸ್ಮಶಾನಕ್ಕೆ ತೆಗೆದುಕೊಂಡು ಹೋಗೋದಾದರೂ ಹೇಗೆ ಅಂತ ಗೊತ್ತಾಗದ ಈ ದಂಪತಿ ಕಂಗಾಲಾಗಿದ್ದರು. ಕೊನೆಗೆ ಕೈಯಲ್ಲಿದ್ದ ಚೀಲದಲ್ಲೇ ಮಗುವಿನ ಶವ ಹಾಕಿಕೊಂಡು ಅಲ್ಲೇ ಇದ್ದ ಬಸ್‌ನಲ್ಲಿ ಕುಳಿತಿದ್ದಾರೆ.
ನವಜಾತ ಶಿಶುವಿನ ಮೃತದೇಹವನ್ನು ವೈದ್ಯಕೀಯ ಕಾಲೇಜಿನಿಂದ ಆಟೋ ರಿಕ್ಷಾದಲ್ಲಿ ಜಬಲ್‌ಪುರ ಬಸ್ ನಿಲ್ದಾಣಕ್ಕೆ ತೆಗೆದುಕೊಂಡು ಬರಲಾಯಿತು. ಆದರೆ ಬಸ್ ಚಾಲಕ ಮೃತದೇಹದೊಂದಿಗೆ ಬಸ್ ಪ್ರವೇಶಿಸಲು ನಿರಾಕರಿಸಿದನು. ಕೊನೆಗೆ ಬಲವಂತದ ಮೇರೆಗೆ ಮೃತದೇಹವನ್ನು ಚೀಲದಲ್ಲಿ ಬಚ್ಚಿಟ್ಟು ಮತ್ತೊಂದು ಬಸ್ಸಿನಲ್ಲಿ 150 ಕಿಲೋಮೀಟರ್ ಪ್ರಯಾಣಿಸಿದ್ದಾರೆ. ಮತ್ತು ಹೇಗೋ ತಡರಾತ್ರಿ ದಿಂಡೋರಿಗೆ ತಲುಪಿದೆ. ಮಗುವಿನ ಶವವನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು ತಮ್ಮ ಸಂಬಂಧಿಕರಿಗಾಗಿ ದಿಂಡೋರಿ ಬಸ್ ನಿಲ್ದಾಣದಲ್ಲಿ ಅಲೆದಾಡುತ್ತಿದ್ದರು, ಆದರೆ ದಿಂಡೂರಿನಲ್ಲೂ ಯಾರೂ ಸಹಾಯಕ್ಕೆ ಮುಂದಾಗಲಿಲ್ಲ.
ಮಗು ಕಳೆದುಕೊಂಡ ನೋವು ತಾಯಿಗೆ ಬಿಕ್ಕಿ-ಬಿಕ್ಕಿ ಅಳುವಂತೆ ಮಾಡಿತ್ತು. ಆದರೆ ತಂದೆ ಮಾತ್ರ ಕಲ್ಲು ಹೃದಯ ಮಾಡಿಕೊಂಡು ಮಗುವಿನ ಮೃತದೇಹ ಇರುವ ಚೀಲ ಹಿಡಿದುಕೊಂಡೇ ಕೂತಿದ್ದ. ಕೊನೆಗೆ ಬಸ್‌ನಿಂದ ಇಳಿಯುವಾಗ ಇದು ಕೆಲವರ ಗಮನಕ್ಕೆ ಬಂದಿದೆ. ತಕ್ಷಣವೇ ಸ್ಥಳೀಯರು ಅಲ್ಲಿ ಜಮಾಯಿಸಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.