ಅಂಕೋಲಾ: ತಾಲ್ಲೂಕಿನ ಸರ್ಕಾರಿ ಉದ್ಯೋಗಿಯೊಬ್ಬರು ಮನೆಯಲ್ಲಿ ಸಾಕಿದ ನಾಯಿಗಳು ಇದೀಗ ದೇಶದ ಸೈನ್ಯದಲ್ಲಿ ಸೇವೆ ಸಲ್ಲಿಸಲು ಸನ್ನದ್ಧವಾಗಿವೆ. ಇಂಡಿಯನ್ ಆರ್ಮಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇಲ್ಲಿನ ಭಾವಿಕೇರಿಯ ರಾಘವೇಂದ್ರ ಭಟ್ ಅವರು ಸಾಕಿದ 17 ನಾಯಿ ಮರಿಗಳನ್ನು ಅಸ್ಸಾಂಗೆ ಕೊಡಾಯ್ದಿದ್ದಾರೆ.
ಭಾವಿಕೇರಿಯ ರಾಘವೇಂದ್ರ ಭಟ್ ಕಳೆದ 25 ವರ್ಷಗಳಿಂದ ವಿವಿಧ ದುಬಾರಿ ತಳಿಗಳಾದ ಡಾಬರ್‌ಮನ್, ಜರ್ಮನ್ ಶೆಫರ್ಡ್, ಪಿಟ್‌ಬುಲ್, ಅಮೇರಿಕನ್ ಬುಲ್ಲಿ, ಮುಧೋಳ್, ಗ್ರೇಟ್ ಡೇನ್ ಹಾಗೂ ಬೆಲ್ಜಿಯಂ ಮೆಲಿನೋಯ್ಸ್ ಮುಂತಾದ ನಾಯಿಗಳನ್ನು ಸಾಕಿದ್ದಾರೆ. ಪ್ರಸ್ತುತ ಅವರ ಮನೆಯಲ್ಲಿದ್ದ ಬೆಲ್ಜಿಯಂ ಮೆಲಿನೋಯ್ಸ್ ತಳಿಯ ನಾಯಿ ಮರಿಗಳೇ ಈಗ ದೇಶಸೇವೆಗೆ ಹೊರಟಿವೆ.
ಇವರು ಸಾಕಿದ ಇದೇ ತಳಿಯ ನಾಯಿಗಳು ಬೆಂಗಳೂರಿನ ಪೊಲೀಸ್ ಇಲಾಖೆ, ಕಾರ್ಕಳ ಎಎನ್‌ಎಫ್, ಬೆಳಗಾಂ ಮತ್ತು ಹುಬ್ಬಳ್ಳಿ ಏರ್‌ಪೋರ್ಟ್‌ನಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ.
ಇವರು ಪೊಲೀಸ್ ಇಲಾಖೆಗೆ ನೀಡಿದ ನಾಯಿಯ ಕುರಿತು ಮಾಹಿತಿ ಪಡೆದು ನೋಡಿ ಇಂಡಿಯನ್ ಆರ್ಮಿಯ ಅಧಿಕಾರಿಗಳು ಇವರನ್ನು ಸಂಪರ್ಕಿಸಿ ನಾಯಿಗಳ ವೀಕ್ಷಣೆಗೆ ಇವರ ಮನೆಗೆ ಭೇಟಿ ನೀಡಿ ಪರಿಶೀಲನೆ ಕೂಡಾ ನಡೆಸಿದ್ದರು. ನಂತರ ಇಂಡಿಯನ್ ಆರ್ಮಿಯ ಸಿಬ್ಬಂದಿ ಕಳೆದ 45 ದಿನಗಳಿಂದ ಇವರ ಮನೆಯಲ್ಲೇ ಇದ್ದು ನಾಯಿಗಳ ನಡವಳಿಕೆ, ಆಹಾರ ಪದ್ಧತಿ, ಅವುಗಳ ಬುದ್ಧಿಮತ್ತೆ, ಆರೋಗ್ಯ ಪರಿಶೀಲಿಸಿ ದಿನಾಲೂ ಉನ್ನತಾಧಿಕಾರಿಗಳಿಗೆ ವರದಿ ನೀಡುತ್ತಿದ್ದರು.
ಗುರುವಾರ ಇಂಡಿಯನ್ ಆರ್ಮಿಯ ತಂಡ ಬಂದು ಬೆಲ್ಜಿಯಂ ಮೆಲಿನೋಯ್ಸ್ ತಳಿಯ 17 ನಾಯಿ ಮರಿಗಳನ್ನು ಅಸ್ಸಾಂನತ್ತ ಕೊಂಡೊಯ್ದಿದ್ದಾರೆ. ಇವು ಆಕ್ರಮಣಕಾರಿ ಮತ್ತು ವಿಶ್ವಾಸರ್ಹ ನಾಯಿಗಳಾಗಿವೆ.
ಕರ್ನಾಟಕದಿಂದ ಮೊದಲ ಬಾರಿಗೆ ಸಾಕಿದ 17 ನಾಯಿ ಮರಿಗಳು ಆರ್ಮಿಗೆ ಹೋಗುತ್ತಿದ್ದು, ಇದು ನಮಗೆ ಹೆಮ್ಮೆ ತಂದಿದೆ ಎನ್ನುತ್ತಾರೆ ರಾಘವೇಂದ್ರ ಭಟ್.
.