ಲಾಹೋರ್(ಜೂ.17): ಏಷ್ಯಾಕಪ್ ಹೈಬ್ರಿಡ್ ಮಾದರಿಗೆ ಬಿಸಿಸಿಐ ಒಪ್ಪಿಗೆ ನೀಡಿದ್ದರೂ ಪಾಕಿಸ್ತಾನ ತಂಡ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಪಾಲ್ಗೊಳ್ಳುವುದು ಇನ್ನೂ ಖಚಿತಗೊಂಡಿಲ್ಲ. ಈ ಬಗ್ಗೆ ಸ್ವತಃ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಅಧ್ಯಕ್ಷ ನಜಂ ಸೇಠಿ ಶುಕ್ರವಾರ ಮಾಹಿತಿ ನೀಡಿದ್ದು, ಸರ್ಕಾರ ಒಪ್ಪಿಗೆ ಸೂಚಿಸಿದರೆ ಮಾತ್ರ ವಿಶ್ವಕಪ್ ಆಡಲು ಭಾರತಕ್ಕೆ ತೆರಳಲಿದ್ದೇವೆ ಎಂದಿದ್ದಾರೆ.
‘ವಿಶ್ವಕಪ್ನ ವೇಳಾಪಟ್ಟಿ ಪ್ರಕಟಗೊಂಡು, ನಮ್ಮ ಪಂದ್ಯಗಳು ನಿರ್ದಿಷ್ಟ ಕ್ರೀಡಾಂಗಣದಲ್ಲಿ ನಡೆಸಲು ತೀರ್ಮಾನಿಸಿದ್ದರೂ ನಾವು ಭಾರತಕ್ಕೆ ಹೋಗಬೇಕೇ ಬೇಡವೇ ಎಂಬುದನ್ನು ಸರ್ಕಾರವೇ ನಿರ್ಧರಿಸಲಿದೆ. ನಾವು ಅಹಮದಾಬಾದ್ನಲ್ಲಿ ಪಂದ್ಯ ಆಡುವುದಕ್ಕೂ ಸರ್ಕಾರ ಒಪ್ಪಿಗೆ ನೀಡಬೇಕು’ ಎಂದಿದ್ದಾರೆ. ಇದೇ ವೇಳೆ 2016ರ ಟಿ20 ವಿಶ್ವಕಪ್ನ ತಮ್ಮ ಪಂದ್ಯವನ್ನು ಧರ್ಮಶಾಲಾದಿಂದ ಕೋಲ್ಕತ್ತಾಕ್ಕೆ ಸ್ಥಳಾಂತರಿಸಿದ್ದನ್ನೂ ಅವರು ಉಲ್ಲೇಖಿಸಿದ್ದಾರೆ.
“ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನ ಪ್ರವಾಸ ಮಾಡುವುದಕ್ಕೆ ಆಗಲಿ, ಅಥವಾ ಪಾಕಿಸ್ತಾನ ಕ್ರಿಕೆಟ್ ತಂಡವು ಭಾರತ ಪ್ರವಾಸ ಮಾಡುವುದಕ್ಕೇ ಆಗಲಿ, ಪಿಸಿಬಿ ಅಥವಾ ಬಿಸಿಸಿಐ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಇದರ ಬದಲಾಗಿ ಆಯಾ ದೇಶದ ಸರ್ಕಾರಗಳು ಏನು ಮಾಡಬೇಕು ಎನ್ನುವುದರ ಕುರಿತಾಗಿ ತೀರ್ಮಾನ ತೆಗೆದುಕೊಳ್ಳಲಿವೆ” ಎಂದು ಪಿಸಿಬಿ ಅಧ್ಯಕ್ಷ ನಜಂ ಸೇಠಿ ಹೇಳಿದ್ದಾರೆ.