Mangaluru International Airport ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಅದಾನಿ ಗ್ರೂಪ್‌ಗೆ ಹಸ್ತಾಂತರಿಸುವ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕರ್ನಾಟಕ ಸರ್ಕಾರವು ಕೇಂದ್ರಕ್ಕೆ ಪತ್ರ ಬರೆಯಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಇದರ ಜೊತೆಗೆ ರಾಜ್ಯದಲ್ಲಿರುವ ಎಲ್ಲಾ ಹೊಸ ವಿಮಾನ ನಿಲ್ದಾಣಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಸಹ ರಾಜ್ಯ ಸರ್ಕಾರ ಆಲೋಚಿಸುತ್ತಿದೆ.
ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ನಿರ್ಧಾರ ತೆಗೆದುಕೊಳ್ಳುವ ಮೊದಲು ಎಎಐ ರಾಜ್ಯವನ್ನು ಸಂಪರ್ಕಿಸಿಲ್ಲ. ಈ ಬಗ್ಗೆ ಸರ್ಕಾರವು ಕೇಂದ್ರಕ್ಕೆ ಪತ್ರ ಬರೆಯಲಿದೆ ಎಂದು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇದೇ ವೇಳೆ, ರಾಜ್ಯಗಳ ಸಂಪನ್ಮೂಲಗಳನ್ನು ಬಳಸಿಕೊಳ್ಳುವಾಗ ರಾಜ್ಯದೊಂದಿಗೆ ಆದಾಯವನ್ನು ಹಂಚಿಕೊಳ್ಳದ ಕೇಂದ್ರದ ನೀತಿಯ ಬಗ್ಗೆ ಪಾಟೀಲ್ ಕಳವಳ ವ್ಯಕ್ತಪಡಿಸಿದರು. ರಾಜ್ಯವು ಆರರಿಂದ ಎಂಟು ಕೋಟಿ ರೂಪಾಯಿ ವೆಚ್ಚವನ್ನು ಭರಿಸುತ್ತದೆ. ನೀರು, ವಿದ್ಯುತ್ ಮತ್ತು ಇತರ ಮೂಲಭೂತ ಸೌಕರ್ಯಗಳ ವೆಚ್ಚವನ್ನು ಸಹ ಭರಿಸುತ್ತದೆ ಎಂದು ಅವರು ಹೇಳಿದರು.
ಹೊಸ ವಿಮಾನ ನಿಲ್ದಾಣಗಳನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‌ಐಐಡಿಸಿ) ಅಡಿಯಲ್ಲಿ ತರಲು ಸರ್ಕಾರ ಯೋಜಿಸುತ್ತಿದೆ ಎಂದು ಸಚಿವರು ಹೇಳಿದರು. ಇದರಿಂದ ಅವುಗಳನ್ನು ರಾಜ್ಯ ಸರ್ಕಾರವೇ ನಿರ್ವಹಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಆದಾಯ ಹೆಚ್ಚಿಸುವ ಉದ್ದೇಶದಿಂದ ಶಿವಮೊಗ್ಗ, ವಿಜಯಪುರ ಮತ್ತು ಹಾಸನದಂತಹ ಹೊಸ ವಿಮಾನ ನಿಲ್ದಾಣಗಳನ್ನು ರಾಜ್ಯ ಸರ್ಕಾರವು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯೋಜಿಸುತ್ತಿದೆ ಎಂದು ಪಾಟೀಲ್ ಹೇಳಿದರು.
ರಾಜ್ಯದಲ್ಲಿ ಇನ್ನೂ ಐದು ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ಸರ್ಕಾರ ಯೋಜಿಸುತ್ತಿದೆ. ವಿಜಯಪುರ ಮತ್ತು ಹಾಸನ ವಿಮಾನ ನಿಲ್ದಾಣಗಳು ನಿರ್ಮಾಣ ಹಂತದಲ್ಲಿದ್ದು, ರಾಯಚೂರಿನಲ್ಲಿ ಕಾಮಗಾರಿ ಶೀಘ್ರ ಆರಂಭವಾಗಲಿದೆ.