ಹದಿನೈದಿಪ್ಪತ್ತು ವರ್ಷಗಳ ಹಿಂದೆ ನಾವೆಲ್ಲ ಹೇಗಿದ್ದೆವು ನೆನಪಿಸಿಕೊಳ್ಳಿ. ಬಸ್ಸ್ಟ್ಯಾಂಡಿನಲ್ಲಿ, ಆಸ್ಪತ್ರೆಯಲ್ಲಿ ಕುಳಿತಾಗ ಇರಬಹುದು. ಬಸ್ಸಿನಲ್ಲಿ, ರೈಲಿನಲ್ಲಿ ಪ್ರಯಾಣಿಸುವಾಗ ಇರಬಹುದು ನಮ್ಮ ಮಧ್ಯೆ ಸಂವಹನವಿರುತ್ತಿತ್ತು. ಅಪರಿಚಿತರಾದರೂ ಅನುವುತನುವು ಆಲಿಸುತ್ತಿದ್ದೆವು. ನಾಲ್ಕಾರು ಮಾತುಗಳಾಡುತ್ತ ಮನಸ್ಸು ಹಗೂರ ಮಾಡಿಕೊಳ್ಳುತ್ತಿದ್ದೆವು. ಸಣ್ಣಪುಟ್ಟ ಸಹಾಯದಿಂದ ಮನಸ್ಸು ತೃಪ್ತಿಗೊಳಿಸಿಕೊಳ್ಳುತ್ತಿದ್ದೆವು. ಆದರೆ ಈಗ? ನಮ್ಮಿಡೀ ಬದುಕನ್ನು ಜಂಗಮವಾಣಿಯ ಕೈವಶಕ್ಕೊಪ್ಪಿಸಿ ತಲೆತಗ್ಗಿಸಿ ಹೊರಟುಬಿಟ್ಟಿದ್ದೇವೆ. ಇದರ ಕೊನೆಯೆಲ್ಲಿ ಗೊತ್ತಿಲ್ಲ. ಇರಲಿ, ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ.
ಈ ಯುವಕ ಉದ್ಯೋಗ ಸಂದರ್ಶನಕ್ಕೆ ಹೊರಟಿದ್ದಾನೆ. ಸಂದರ್ಶನವೆಂದರೆ ಅಡಿಯಿಂದ ಮುಡಿಯವರೆಗೆ ಟಿಪ್ ಟಾಪ್ ಆಗಿ ಹೊರಡಬೇಕು. ಯಾಕೋ ಏನೋ ಈ ಟ್ವೀಟ್ನಲ್ಲಿರುವ ಯುವಕನಿಗೆ ತಾನು ಕಟ್ಟಿಕೊಂಡ ಟೈ ಸರಿಯಾಗಿಲ್ಲ ಎಂದೆನ್ನಿಸಿದೆ. ಆ ಕಸಿವಿಸಿಯನ್ನು ಗ್ರಹಿಸಿದ ಕೆಂಪುಕೋಟಿನೊಳಗಿನ ವಯಸ್ಸಾದ ಮಹಿಳೆ ಪಕ್ಕದಲ್ಲಿದ್ದ ತನ್ನ ಗಂಡನ ಮೊಣಕೈಗೆ ತಿವಿದು ಅವನೆಡೆ ಗಮನ ಹರಿಸುವಂತೆ ಮಾಡಿದ್ದಾಳೆ.
ತಾನು ಕುಳಿತ ಜಾಗ ಬಿಟ್ಟು ಆ ಯುವಕನೆಡೆ ಹೋಗಿ ಟೈ ಕಟ್ಟಿಕೊಳ್ಳುವುದು ಹೇಗೆ ಎಂದು ತೋರಿಸಿಕೊಟ್ಟಿದ್ದಾನೆ ಆತ. ಈ ಫೋಟೋ ನೋಡಿದ ನೆಟ್ಟಿಗರ ಮನಸ್ಸು ಮೃದುವಾಗಿದೆ. ಮನುಷ್ಯನನ್ನು ಮನಷ್ಯ ಹುರಿದು ಮುಕ್ಕುವ ಈ ಜಗತ್ತಿನಲ್ಲಿ ತಾಳ್ಮೆಯಿಂದ ಮತ್ತು ಇನ್ನಿತರೇ ಹಂಗುಗಳನ್ನು ತೊರೆದು ಸಹಾಯ ಮಾಡುವ ಇಂಥ ಒಳ್ಳೆಯ ಜನರೂ ಇದ್ದಾರಲ್ಲ ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗೆ ಪ್ರೀತಿ ಹಂಚಲು ಇಂಥ ಕೆಲವರಾದರೂ ಇದ್ದುದಕ್ಕೆ ನಾವೆಲ್ಲ ಆರಾಮಾಗಿ ಬದುಕುತ್ತಿದ್ದೇವೆ ಎಂದು ಹಲವರು ಹೇಳಿದ್ಧಾರೆ.