ಮೈಸೂರು: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಟೋಲ್ ದರ ಸದ್ದಿಲ್ಲದೇ ಏರಿಕೆಯಾಗಿದ್ದು, ವಾಹನ ಸವಾರರು ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನು ಈ ಬಗ್ಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಮರ್ಥಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ಇಂದು(ಜೂನ್ 13) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಇಡೀ ದೇಶದಲ್ಲಿ ಆರ್ಥಿಕ ವರ್ಷ ಶುರುವಾದಾಗ ಟೋಲ್ ಹೆಚ್ಚಳ ಸಹಜ. ಈ ಹೈವೆಗೆ ಏಪ್ರಿಲ್ ನಲ್ಲಿ ಟೋಲ್ ಹೆಚ್ಚಳ ಆಗಬೇಕಿತ್ತು. ಆಗ ಆಗಿರಲಿಲ್ಲ. ಈಗ ಶೇ.22ರಷ್ಟು ಏರಿಕೆ ಆಗಿದೆ. ಹಾಗೂ ಟೋಲ್ ಸಂಗ್ರಹದ ಆರಂಭದಲ್ಲಿ ಫಾಸ್ಟ್ ಟ್ಯಾಗ್ ಸಮಸ್ಯೆ ಇತ್ತು, ಈಗ ಸಮಸ್ಯೆ ಇಲ್ಲ. ಫಾಸ್ಟ್ ಟ್ಯಾಗ್ ಇರದಿದ್ದರೆ ಡಬಲ್ ಚಾರ್ಜ್ ಕಟ್ಟುವುದು ಕಡ್ಡಾಯವಾಗಿದೆ ಎಂದು ಹೇಳಿದರು.
ಕೆಇಆರ್ಸಿ ವಿದ್ಯುತ್ ದರ ಏರಿಕೆ ಮಾಡಲು ಶಿಫಾರಸು ಮಾಡಿತ್ತು. ಅದನ್ನು ತಡೆಯುವ, ತಿರಸ್ಕರಿಸುವ ಹಕ್ಕು ರಾಜ್ಯ ಸರ್ಕಾರಕ್ಕೆ ಇದೆ. ಗುತ್ತಿಗೆದಾರರ ಅನುದಾನ ಬಿಡುಗಡೆ ಆದೇಶಕ್ಕೆ ತಡೆ ಹಿಡಿಯುತ್ತೀರಿ. ಆದ್ರೆ, ವಿದ್ಯುತ್ ಬಿಲ್ ಆದೇಶಕ್ಕೆ ಏಕೆ ತಡೆ ನೀಡಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಪ್ರಶ್ನಿಸಿದ ಪ್ರತಾಪ್ ಸಿಂಹ, ಕಾಂಗ್ರೆಸ್ನವರು ಲೂಟಿ ಮಾಡಲು ಬಂದಿದ್ದಾರೆ. ಜನ ವಿರೋಧಿ ಮುಖ ಮರೆಮಾಚಲು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಎಲ್ಲಿಂದ ನಿಮಗೆ ಕಮಾಯಿ ಆಗುತ್ತೆ ಎಲ್ಲಿಂದ ನಿಮಗೆ ವ್ಯಾಪಾರ ಆಗುತ್ತೆ? ಆ ವಿಚಾರದ ಬಗ್ಗೆ ಮಾತ್ರ ನಿಮ್ಮ ಆಸಕ್ತಿನಾ ? ಕಾಂಗ್ರೆಸ್ ನವರು ಲೂಟಿ ಮಾಡಲು ಬಂದಿದ್ದಾರೆ. ತಮ್ಮ ಜನವಿರೋಧಿ ಮುಖ ಮರೆ ಮಾಚಲು ಬಿಜೆಪಿ ಮೇಲೆ ಆರೋಪ ಮಾಡಬೇಡಿ. ಈ ಸರ್ಕಾರ ಒಂದಷ್ಟು ಜನರ ಸುಲಿಗೆ, ಲೂಟಿ ಮಾಡಲು ಬಂದಿದೆ. ಗೋ ಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿತ್ತು. ಇದನ್ನು ಮುಂದುವರಿಸುವ ಬಗ್ಗೆ ಮಾತಾಡಿ ಎಂದರು.
ಸಿದ್ದರಾಮಯ್ಯ ಅವರೇ ಹಣ ಎಲ್ಲಿಂದ ತರುತ್ತೀರಾ ಮೊದಲು ಹೇಳಿ. ಸುಲಿಗೆ ಮಾಡಿ ಯೋಜನೆ ಜಾರಿ ಮಾಡುವುದು ‘ಕೈ’ ಸಂಸ್ಕೃತಿನಾ? ಸಿಎಂ, DCM, ಎಂ.ಬಿ.ಪಾಟೀಲ್ ಆಸ್ತಿ ಮಾರಿ ಗ್ಯಾರಂಟಿ ಜಾರಿ ಮಾಡ್ತೀರಾ? ಈ ಬಗ್ಗೆ ಪ್ರಶ್ನೆ ಕೇಳಿದವರೆ ಮನುವಾದಿಗಳು ಅಂದರೆ ಏನರ್ಥ? ಐದು ವರ್ಷದ ನಂತರ ಕಾಂಗ್ರೆಸ್ಗೆ ರಾಜಕೀಯ ಭವಿಷ್ಯ ಇರಲ್ಲ. ಆದರೆ ಕರ್ನಾಟಕಕ್ಕೆ ಭವಿಷ್ಯ ಇರುತ್ತದೆ, ಅದಕ್ಕೆ ಕಲ್ಲು ಹಾಕಬೇಡಿ ಎಂದು ಕಿಡಿಕಾರಿದರು.
ಬಿಜೆಪಿ ಬಗ್ಗೆ ಜನರಿಗೆ ಅಸಮಾಧಾನ ಇದ್ದ ಕಾರಣ ತಿರಸ್ಕರಿಸಿದ್ದಾರೆ. ಕಾಂಗ್ರೆಸ್ನ ಗ್ಯಾರಂಟಿಗಳನ್ನು ನೋಡಿ ರಾಜ್ಯದ ಜನ ಮತ ಹಾಕಿದ್ದಾರೆ. ಕೆಲವು ಮುಖಂಡರಿಂದ ಬಿಜೆಪಿಯವರು ಮಣ್ಣು ತಿಂದಿದ್ದು ಆಗಿದೆ. ಬಿಜೆಪಿ, ಮನುವಾದ, RSS ಎಂದು ವಿಷಯಾಂತರ ಮಾಡಬೇಡಿ ಆಕ್ರೋಶ ವ್ಯಕ್ತಪಡಿಸಿದರು.