ಬೆಂಗಳೂರು: ಜಾಗತಿಕ ಆರ್ಥಿಕತೆಯಲ್ಲಿ ಭಾರತ ಒಂದು ಬೆಳ್ಳಿ ಚುಕ್ಕೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 2014ರಿಂದ ಈಚೆಗೆ ಭಾರತ ಸಾಧಿಸಿದ ಆರ್ಥಿಕತೆಯ ಬಗ್ಗೆ ಸರಣಿ ಟ್ವೀಟ್ಗಳ ಮೂಲಕ ಮಾಹಿತಿ ನೀಡಿದ ಅವರು, ಅಂದಿನ ಪರಿಸ್ಥಿತಿ ಮತ್ತು ಇಂದಿನ ಪರಿಸ್ಥಿತಿ ಬಗ್ಗೆ ಹೋಲಿಕೆ ಮಾಡಿದ್ದಾರೆ. 2014ರಲ್ಲಿ ಜಾಗತಿಕವಾಗಿ 10ನೇ ಅತಿದೊಡ್ಡ ಆರ್ಥಿಕ ದೇಶವಾಗಿದ್ದ ಭಾರತ 2023ರಲ್ಲಿ ಐದನೇ ಸ್ಥಾನಕ್ಕೆ ಏರಿರುವ ಸಂಗತಿಯನ್ನು ಅವರು ತಿಳಿಸಿದ್ದಾರೆ. ಅಮೆರಿಕ, ಚೀನಾ, ಜಪಾನ್ ಮತ್ತು ಜರ್ಮನಿ ಬಿಟ್ಟರೆ ಭಾರತದ ಜಿಡಿಪಿ ಅತಿದೊಡ್ಡದು. ಇತ್ತೀಚೆಗಷ್ಟೇ ಬ್ರಿಟನ್ ಜಿಡಿಪಿಯನ್ನು ಭಾರತ ಹಿಂದಿಕ್ಕಿದೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿರುವ ಟ್ವೀಟ್ ಪ್ರಕಾರ, 2014ರಲ್ಲಿ ಭಾರತದ ಜಿಡಿಪಿ 2 ಟ್ರಿಲಿಯನ್ ಡಾಲರ್ ಇತ್ತು. ಅಂದರೆ ಸುಮಾರು 160 ಲಕ್ಷಕೋಟಿ ರುಪಾಯಿ ಇತ್ತು. ಈಗ 2023ರಲ್ಲಿ ಭಾರತದ ಜಿಡಿಪಿ 3.75 ಟ್ರಿಲಿಯನ್ ಡಾಲರ್ಗೆ (ಸುಮಾರು 300 ಲಕ್ಷಕೋಟಿ ರೂ) ಬೆಳೆದಿದೆ. ಅಂದರೆ 9 ವರ್ಷದಲ್ಲಿ ಆರ್ಥಿಕತೆ ಹೆಚ್ಚೂಕಡಿಮೆ ಎರಡು ಪಟ್ಟು ಬೆಳೆದಿರುವುದನ್ನು ಗಮನಿಸಬಹುದು. ಆದರೆ, ನಿರ್ಮಲಾ ಸೀತಾರಾಮನ್ ಅವರ ಈ ಟ್ವೀಟ್ ಸದ್ಯ ಅಲಭ್ಯವಾಗಿದೆ.
ಕೆಲ ವರದಿಗಳಲ್ಲಿ ನೀಡಲಾಗಿರುವ ಅಂಕಿ ಸಂಖ್ಯೆ ಪ್ರಕಾರ 2014ರಲ್ಲಿ ಭಾರತದ ಜಿಡಿಪಿ 119 ಲಕ್ಷ ಕೋಟಿ ರೂ ಇತ್ತು. ಇದು ಮೂರು ಪಟ್ಟು ಹೆಚ್ಚು ಬೆಳವಣಿಗೆ ಎಂಬುದು ಗಮನಾರ್ಹ
ಭಾರತದ ಜಿಡಿಪಿ ಬೆಳವಣಿಗೆ ದರ ಕೂಡ ಸದ್ಯ ವಿಶ್ವದಲ್ಲೇ ಅತಿಹೆಚ್ಚಿನ ಮಟ್ಟದಲ್ಲಿದೆ. 2022-23ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 7.2ರಷ್ಟು ಬೆಳವಣಿಗೆ ಹೊಂದಿದೆ ಎಂಬ ಸಂಗತಿ ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಿದ ವರದಿಯಿಂದ ಬೆಳಕಿಗೆ ಬಂದಿದೆ. ಈ ಹಣಕಾಸು ವರ್ಷ (2023-24) ಭಾರತದ ಜಿಡಿಪಿ ಶೇ. 6.5ರಷ್ಟು ವೃದ್ಧಿಸುವ ಸಾಧ್ಯತೆ ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಅಂದಾಜು ಮಾಡಿತ್ತು. ದೇಶೀಯವಾಗಿ ಬೇಡಿಕೆ ಹೆಚ್ಚಿರುವುದು, ಗೃಹ ವೆಚ್ಚಗಳು, ಹೂಡಿಕೆಗಳು ಇವೆಲ್ಲವೂ ಭಾರತದ ಈ ವರ್ಷದ ಆರ್ಥಿಕ ಬೆಳವಣಿಗೆಗೆ ಪುಷ್ಟಿಕೊಡಬಹುದು ಎಂದು ನಿರೀಕ್ಷಿಸಲಾಗಿದೆ.
ಭಾರತದಲ್ಲಿ ಹಣದುಬ್ಬರವೂ ಇಳಿಮುಖವಾಗುತ್ತಿರುವುದು ಪಾಸಿಟಿವ್ ಸೂಚನೆ ಆಗಿದೆ. ಕಳೆದ ಮೂರು ತಿಂಗಳಿಂದ ಸತತವಾಗಿ ಇಳಿಯುತ್ತಿರುವ ಹಣದುಬ್ಬರ ಮೇ ತಿಂಗಳಲ್ಲಿ ಶೇ. 4.25ಕ್ಕೆ ಇಳಿದಿದೆ. ಇದು ಮುಂದಿನ ಆರ್ಥಿಕ ಬೆಳವಣಿಗೆಯ ವೇಗಕ್ಕೆ ಇನ್ನಷ್ಟು ಶಕ್ತಿ ತುಂಬಬಹುದು.