ರೆಡ್ಡಿ, ಪತ್ನಿ ಅರುಣಾಗೆ ಶಾಕ್‌ – 100ಕ್ಕೂ ಹೆಚ್ಚು ಆಸ್ತಿ ಜಪ್ತಿಗೆ ಆದೇಶ

ಬೆಂಗಳೂರು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಗಂಗಾವತಿ ಶಾಸಕ, ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಪತ್ನಿ ಲಕ್ಷ್ಮೀ ಅರುಣಾ ರೆಡ್ಡಿ ಅವರ ಆಸ್ತಿ ಜಪ್ತಿ ಮಾಡುವಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಆದೇಶ ಹೊರಡಿಸಿದೆ.

ಕ್ರಿಮಿನಲ್ ಕೇಸ್ ಮುಗಿಯುವವರೆಗೆ ಒಟ್ಟು 100ಕ್ಕೂ ಹೆಚ್ಚು ಆಸ್ತಿಗಳನ್ನು ಜಪ್ತಿ ಮಾಡುವಂತೆ ವಿಶೇಷ ಕೋರ್ಟ್ ಆದೇಶ ಪ್ರಕಟಿಸಿದೆ. ಜನಾರ್ದನ ರೆಡ್ಡಿ ದಂಪತಿಗೆ ಸೇರಿದ ಒಟ್ಟು 124 ಆಸ್ತಿಗಳ ಜಪ್ತಿ ಕೋರಿ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ತನಿಖೆ ವೇಳೆ ಸೈಟ್, ಕಟ್ಟಡ, ಖಾಲಿ ಜಮೀನು ಸೇರಿದಂತೆ ನೂರಕ್ಕೂ ಅಧಿಕ ಆಸ್ತಿಗಳನ್ನು ಸಿಬಿಐ ಪತ್ತೆ ಮಾಡಿತ್ತು

ಅಕ್ರಮ ಗಣಿಗಾರಿಕೆ ಹಣದಿಂದ ರೆಡ್ಡಿ ಹೊಸದಾಗಿ ತೆಲಂಗಾಣ ರಾಜ್ಯಗಳಲ್ಲಿ 219 ಕಡೆ ಆಸ್ತಿಗಳನ್ನು ಖರೀದಿ ಮಾಡಿದ್ದಾರೆ. ಈ ಆಸ್ತಿಗಳನ್ನು ಜಪ್ತಿ ಮಾಡಲು ಅನುಮತಿ ನೀಡಬೇಕೆಂದು ಸರ್ಕಾರಕ್ಕೆ 2022ರ ಆಗಸ್ಟ್‌ 30 ರಂದು ಸಿಬಿಐ ಮನವಿ ಮಾಡಿತ್ತು.

ಆಸ್ತಿ ಜಪ್ತಿ ಅರ್ಜಿ ವಿಚಾರ ತಿಳಿದ ರೆಡ್ಡಿ ಕರ್ನೂಲ್, ರಂಗಾರೆಡ್ಡಿ ಜಿಲ್ಲೆಗಳಲ್ಲಿ ಆಸ್ತಿ ಮಾರಾಟಕ್ಕೆ ಯತ್ನಿಸಿದ್ದರು.  ಈ ವಿಚಾರ ತಿಳಿಯುತ್ತಿದ್ದಂತೆ ಆಸ್ತಿ ಜಪ್ತಿಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಬೇಕು ಅಂತಾ ಸಿಬಿಐ ಹೈಕೋರ್ಟ್‌ನಲ್ಲಿ ವಾದ ಮಂಡಿಸಿತ್ತು.

ನಿಮ್ಮ ಕಾರ್ಯವೈಖರಿ ಇದೇನಾ? ಐದು ತಿಂಗಳಾದರೂ ಯಾಕೆ ಕ್ರಮ ಕೈಗೊಂಡಿಲ್ಲ? ನಿಮ್ಮ ದೃಷ್ಟಿಯಲ್ಲಿ ನಿರ್ಧಾರ ಕೈಗೊಳ್ಳದೇ ಇರುವುದು ಒಂದು ಕ್ರಮವಿರಬಹುದು. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ ಬೀಸಿ ನೋಟಿಸ್ ಜಾರಿ ಮಾಡಿತ್ತು. ಹೈಕೋರ್ಟ್‌ ಬಿಸಿ ಮುಟ್ಟಿಸಿದ ಬೆನ್ನಲ್ಲೇ ಅಂದಿನ ಬೊಮ್ಮಾಯಿ ಸರ್ಕಾರ ಈ ವರ್ಷದ ಜನವರಿಯಲ್ಲಿ ರೆಡ್ಡಿಯ ಆಸ್ತಿ ಜಪ್ತಿಗೆ ಅನುಮತಿ ನೀಡಿತ್ತು.