ಮಡಿಕೇರಿ: ಮಡಿಕೇರಿ ನಗರದಲ್ಲಿ ಪ್ರಕೃತಿ ಮೇಲೆ ಭಾರೀ ಅತ್ಯಾಚಾರ ನಡೆಯುತ್ತಿದೆ. ಜೆಸಿಬಿ ಘರ್ಜನೆಗೆ ಬೆಟ್ಟಗಳೇ ಮಂಗಮಾಯವಾಗಿವೆ. ಆಂಧ್ರ ಮೂಲದ ಉದ್ಯಮಿಗಳು ಬೆಟ್ಟಗಳನ್ನ ಅವೈಜ್ಞಾನಿಕವಾಗಿ ಅಗೆದು ಬಟಾಬಯಲು ಮಾಡುತ್ತಿದ್ದಾರೆ. ಹೀಗಾಗಿ ಅವೈಜ್ಞಾನಿಕ ಕಾಮಗಾರಿ ಸ್ಥಗಿತ ಕೋರಿ ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ ಅವರ ಪುತ್ರ ಏರ್ ಮಾರ್ಷಲ್ ನಂದಾ ಕಾರ್ಯಪ್ಪನವರು ಜಿಲ್ಲಾಧಿಕಾರಿ ಮತ್ತು ನಗರ ಸಭೆಗೆ ದೂರು ನೀಡಿದ್ದಾರೆ.
ಮಡಿಕೇರಿ ನಗರದ ಮಂಗಳಾದೇವಿ ನಗರದಲ್ಲಿ ಜೆಸಿಬಿಗಳ ಮೂಲಕ ಬೆಟ್ಟಗಳನ್ನು ಕೊರೆಯಲಾಗಿದೆ. ನೆಲ್ಲೂರು ಮೂಲದ ವೆಂಕಟೇಶ್ವರ ರೆಡ್ಡಿ, ಅಪ್ಪಾರಾವ್ ಎಂಬುವವರು ಈ ಕೃತ್ಯ ಎಸಗುತ್ತಿದ್ದಾರೆ. ಬೆಟ್ಟದ ಜೊತೆ ನೂರಾರು ಮರಗಳ ಮಾರಣ ಹೋಮವಾಗುತ್ತಿದೆ. ಮರಗಳ ಕುರುಹುಗಳೇ ಸಿಗದಂತೆ ಮಣ್ಣು ಮುಚ್ಚಿ ದುಷ್ಕೃತ್ಯ ಎಸಗಲಾಗಿದೆ. ನೈಸರ್ಗಿಕ ನೀರಿನ ಸೆಲೆಗಳ ಮೇಲೆಯೇ ಸಿಮೆಂಟ್ ರಸ್ತೆ ನಿರ್ಮಾಣ ಮಾಡಿದ್ದಾರೆ. 50 ಎಕರೆಗೂ ಅಧಿಕ ಪ್ರದೇಶದಲ್ಲಿ ಜೆಸಿಬಿ ಬಳಸಿ ಬೆಟ್ಟ ಅಗೆದಿದ್ದು ರೆಸಾರ್ಟ್, ವಿಲ್ಲಾ ನಿರ್ಮಾಣಕ್ಕಾಗಿ ಪರ್ವತ ಅಗೆದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮಳೆಗಾಲದಲ್ಲಿ ಭೂಕುಸಿತವಾಗುವ ಸಾಧ್ಯತೆ ಇದ್ದು ಬೆಟ್ಟದ ತಪ್ಪಲಿನ ನಿವಾಸಿಗಳಲ್ಲಿ ತೀವ್ರ ಆತಂಕ ಉಂಟಾಗಿದೆ. ಹೀಗಾಗಲೇ ಮಂಗಳದೇವಿ ನಗರ ಸೂಕ್ಷ್ಮ ಪ್ರದೇಶ ಎಂದು ಭೂ ವಿಜ್ಞಾನಿಗಳು ವರದಿ ನೀಡಿದ್ದಾರೆ.