ತಿರುಪತಿ : ತಿರುಪತಿ-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಭೀಕರ ರಸ್ತೆ ಅಪಘಾತ ಸಮಭವಿಸಿದೆ. ಈ ವೇಳೆ ಐವರು ಮೃತಪಟ್ಟಿದ್ದು, 8 ಮಂದಿ ಗಾಯಗೊಂಡಿದ್ದಾರೆ. ತಿರುಪತಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಗುಂಪೊಂದು ಪುತ್ತೂರು ಸಮೀಪದ ವಡಮಲ್ ಪೇಟೆಯಲ್ಲಿರುವ ಅಂಜೇರಮ್ಮನ ಜಾನಪದ ದೇವಸ್ಥಾನಕ್ಕೆ ಭೇಟಿ ನೀಡಲು ಪ್ರಯಾಣಿಕ ವಾಹನವನ್ನು ಬಾಡಿಗೆಗೆ ಪಡೆದುಕೊಂಡಿತ್ತು ಎಂದು ತಿಳಿದುಬಂದಿದೆ.
ವಡಮಲ್‌ಪೇಟೆ ಘಾಟ್ ರಸ್ತೆಯ ಬಳಿ ಎಸ್.ವಿ ಪುರಂ ಟೋಲ್ ಪ್ಲಾಜಾ ದಾಟಿದ ಬಳಿಕ ಯು-ಟರ್ನ್ ತಪ್ಪಿಸಲು ತಪ್ಪು ದಿಕ್ಕಿನಲ್ಲಿ ಸಾಗಿದ ವಾಹನ ಚಾಲಕ, ಎದುರಿನಿಂದ ಬರುತ್ತಿದ್ದ ಹಾಲಿನ ವ್ಯಾನ್‌ಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡ ಹಲವರನ್ನು ಪೊಲೀಸರು ತಕ್ಷಣ ತಿರುಪತಿಯ ಎಸ್‌ವಿಆರ್‌ಆರ್ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಅಪಘಾತದಲ್ಲಿ ಗಿರಿಜಮ್ಮ ಮತ್ತು ರೇವಂತ್ ಎಂಬ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟರೆ, ರೇಖಾ, ಅಜಯ್ ಕುಮಾರ್ ಮತ್ತು ಹಾಲಿನ ವ್ಯಾನ್ ಚಾಲಕ ಸುಬ್ರಮಣ್ಯಂ ಸೇರಿದಂತೆ ಮೂವರು ನಂತರ ತಿರುಪತಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ ಎಂದು ಪುತ್ತೂರು ಡಿಎಸ್ಪಿ ಕೆ. ಶ್ರೀನಿವಾಸ್ ಸುದ್ದಿಗಾರರಿಗೆ ತಿಳಿಸಿದರು.
ಸ್ಥಳೀಯ ದೇಗುಲಕ್ಕೆ ಪ್ರಯಾಣದ ದೂರವನ್ನು ಕಡಿಮೆ ಮಾಡುವ ಸಲುವಾಗಿ ಯು-ಟರ್ನ್ ತಪ್ಪಿಸಲು ವಾಹನವನ್ನು ರಾಂಗ್ ರೂಟ್‌ನಲ್ಲಿ ತೆಗೆದುಕೊಂಡ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಡಿಎಸ್ಪಿ ಶ್ರೀನಿವಾಸ್ ಹೇಳಿದ್ದಾರೆ.
ಇನ್ನು, ಈ ಸಂಬಂಧ ಪುತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.