ಜೋಯಿಡಾ :ಬಸ್ಸಿಗಾಗಿ ಕಾದು ಕಾದು ಸುಸ್ತಾದ ವಿದ್ಯಾರ್ಥಿಗಳು : ಬಸ್ ನಿಲ್ದಾಣದಲ್ಲೆ ಜಾಗರಣೆ, ಸಾರಿಗೆ ಘಟಕದ ನಿರ್ಲಕ್ಷ್ಯಕ್ಕೆ ವ್ಯಾಪಕ ಆಕ್ರೋಶ

ಜೋಯಿಡಾ : ಸದಾ ಒಂದಲ್ಲ ಒಂದು ಅವಾಂತರಕ್ಕೆ ಕಾರಣವಾಗುತ್ತಿರುವ ಸಾರಿಗೆ ಘಟಕ ಮತ್ತೆ ಜೋಯಿಡಾ ತಾಲೂಕಿನ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗುವ ರೀತಿಯಲ್ಲಿ ನಿರ್ಲಕ್ಷ್ಯ ಮಾಡಿದ ಘಟನೆ ಇಂದು ಶುಕ್ರವಾರ ರಾತ್ರಿ 7.30 ಗಂಟೆಗೆ ನಡೆದಿದೆ.

ಜೋಯಿಡಾ ತಾಲೂಕು ಕೇಂದ್ರದಿಂದ ಪ್ರತಿದಿನ ಸಂಜೆ 5.30 ಗಂಟೆಗೆ ಕಾರ್ಟೋಳಿ ಹಾಗೂ ಅಲ್ಲಿಯ ಸುತ್ತಮುತ್ತಲ ಹಳ್ಳಿಗೆ ಹೋಗಬೇಕಾದ ಸಾರಿಗೆ ಬಸ್, ರಾತ್ರಿ 7.45 ನಿಮಿಷವಾದರೂ ಬಸ್ ನಿಲ್ದಾಣಕ್ಕೆ ಬಾರದೇ ಶಾಲಾ/ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಜೋಯಿಡಾ ತಾಲ್ಲೂಕು ಕೇಂದ್ರದಿಂದ 25 ರಿಂದ 30 ಕಿ.ಮೀ ದೂರದಲ್ಲಿರುವ ಕಾರ್ಟೋಳಿ, ಮುಡಿಯೆ, ಡೇರಿಯಾ, ಮಾದಲಿ, ಖಾನಗಾಂವ, ವಾಗೆಲಿ ಸೇರಿದಂತೆ ಮೊದಲಾದ ಕಾಡಿನೊಳಗಿನ ಮಜರೆಗಳಿಗೆ ಹೋಗಬೇಕಾದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರು ಪ್ರತಿದಿನವೂ ಈ ರೀತಿ ಸಾರಿಗೆ ಬಸ್ಸಿನ ಸಮಸ್ಯೆ ಎದುರಾಗುತ್ತಿದ್ದು, ಸಾರಿಗೆ ಘಟಕದ ದಿವ್ಯ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ವಿದ್ಯಾರ್ಥಿನಿಯರು ಸೇರಿದಂತೆ ಸರಿ ಸುಮಾರು 60 ರಿಂದ 70 ವಿದ್ಯಾರ್ಥಿಗಳು ಹಾಗೂ 30 ಕ್ಕೂ ಹೆಚ್ಚು ಸಾರ್ವಜನಿಕರು ಇದೀಗ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸಂಜೆ 6.30 ಗಂಟೆಯೊಳಗೆ ಮನೆ ಸೇರಬೇಕಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ರಾತ್ರಿ 7.45 ಗಂಟೆಯಾದರೂ ಇನ್ನೂ ಬಸ್ ನಿಲ್ದಾಣದಲ್ಲೆ ಇರುವಂತಾಗಿದೆ. ಸಮಯಕ್ಕೆ ಸರಿಯಾಗಿ ಬಸ್ ಬಾರದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಅಂತಿಮ ಎಚ್ಚರಿಕೆಯನ್ನು ಇಂದು ವಿದ್ಯಾರ್ಥಿಗಳು ನೀಡಿದ್ದಾರೆ.