ಸಚಿವ ಮಂಕಾಳ ವೈದ್ಯ ಅವರ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ

ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಂಕಾಳ ವೈದ್ಯ ಅವರು ನಗರದ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಭೆಯನ್ನು ನಡೆಸಿ ಶಿಕ್ಷಕರಿಂದ ಕುಂದುಕೊರತೆಗಳನ್ನು ಆಲಿಸಿದರು.

ಶಿಕ್ಷಕರು ಮಕ್ಕಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ, ಅವರಿಗೆ ಗುಣಮಟ್ಟದ ಶಿಕ್ಷಣ ನೀಡುವ ಅಗತ್ಯವನ್ನು ಒತ್ತಿ ಹೇಳಿದ ಅವರು, ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಕರೆ ನೀಡಿದರು. ತಾವು ಕೆಲಸ ಮಾಡುವ ಶಾಲೆಯನ್ನು ತಮ್ಮದೇ ಶಾಲೆ ಎನ್ನುವ ಭಾವನೆಯಿಂದ ಕೆಲಸ ಮಾಡಬೇಕು. ಊರಿನವರ ಸಹಕಾರದಿಂದ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕೆಂದರು.

ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದು ಎನ್ನುವುದು ನನ್ನ ಆಶಯ. ಶಾಲೆಗಳಲ್ಲಿ ಯಾವುದೇ ರೀತಿಯ ತೊಂದರೆ, ಮೂಲಭೂತ ಸೌಕರ್ಯಗಳ ಕೊರತೆ ಇದ್ದರೂ ಸರಿಪಡಿಸಿಕೊಡುತ್ತೇನೆ. ಶಾಲೆಗಳಲ್ಲಿ ಯಾವುದೇ ಕೊರತೆ ಇಲ್ಲದ ಹಾಗೆ ಮಾಡಬೇಕಿದೆ. ಈ ಮೂಲಕ ರಾಜ್ಯದಲ್ಲಿ ನಮ್ಮ ಕ್ಷೇತ್ರದ ಶಾಲೆಗಳು ಮಾದರಿಯಾಗಬೇಕೆನ್ನುವುದು ನನ್ನ ಬಯಕೆ ಎಂದ ಅವರು, ಯಾವುದೇ ಕಾರಣಕ್ಕೂ ನಾನು ಶಿಕ್ಷಕರಿಗೆ ತೊಂದರೆ ಕೊಡುವುದಿಲ್ಲ. ಕೆಲವರು ನನಗೆ ತೊಂದರೆ ಕೊಟ್ಟಿದ್ದರೂ ಅದನ್ನೆಲ್ಲ ಮರೆತಿದ್ದೇನೆ. ಎಲ್ಲ ಶಿಕ್ಷಕರನ್ನೂ ನಾನು ಗುರುಗಳಂತೆ ನೋಡುತ್ತಿದ್ದು, ಶಾಲೆಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ನನಗೆ ಪಟ್ಟಿ ಮಾಡಿ ಕೊಟ್ಟರೆ ಸಮಸ್ಯೆಯನ್ನು ಖಂಡಿತ ಬಗೆಹರಿಸುತ್ತೇನೆ ಎಂದರು.

ಸರಕಾರಿ ಶಾಲೆಗಳಲ್ಲಿ ದಾಖಲಾಗುವ ಹೆಚ್ಚಿನ ವಿದ್ಯಾರ್ಥಿಗಳು ಬಡವರಾಗಿರುವುದರಿಂದ ಅವರಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎನ್ನುವುದು ನನ್ನ ಆಸೆ. ಆ ನಿಟ್ಟಿನಲ್ಲಿ ನನ್ನ ಮೊದಲ ಆದ್ಯತೆ ಶಿಕ್ಷಣಕ್ಕೆ, ಎರಡನೇ ಆದ್ಯತೆ ದೇವಸ್ಥಾನಕ್ಕೆ ಎಂದ ಅವರು, ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಿ ಗುಣಮಟ್ಟದ ಶಿಕ್ಷಣ ನೀಡುವಂತಾಗಲು ಊರಿನವರು, ದಾನಿಗಳ ಸಹಕಾರವೂ ಅಗತ್ಯವಿದೆ. ಹೀಗಾಗಿ ದಾನಿಗಳು ಸರಕಾರಿ ಶಾಲೆಯ ಅಭಿವೃದ್ಧಿಗೆ ಕೈಜೋಡಿಸುವಂತಾಗಬೇಕು ಎಂದು ಸಚಿವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ಪ್ರಭಾರ ಕ್ಷೇತ್ರಶಿಕ್ಷಣಾಧಿಕಾರಿ ಶಾರದಾ ನಾಯಕ ಮುಂತಾದವರಿದ್ದರು.