ದಾಂಡೇಲಿ : ನಗರದ ಸುದರ್ಶನ ನಗರದಲ್ಲಿ ದಾಂಡೇಲಿ ನಗರ ಪೊಲೀಸ್ ಠಾಣೆಯ ಆಶ್ರಯದಡಿ ಜನಸಂಪರ್ಕ ಸಭೆಯು ಇಂದು ಜರುಗಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಎಸೈ ಬಸವರಾಜ ಒಕ್ಕುಂದ ಅವರು ಪ್ರತಿಯೊಂದು ವಾರ್ಡಿಗೂ ಪೊಲೀಸ್ ಬೀಟ್ ವ್ಯವಸ್ಥೆಯಿದ್ದು, ಬೀಟ್ ಪೊಲೀಸರನ್ನು ನಿಯೋಜಿಸಲಾಗಿದೆ. ನಿಮ್ಮ ಪ್ರದೇಶ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆಗಳು ಕಂಡು ಬಂದಲ್ಲಿ ಬೀಟ್ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡುವಂತೆ ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪಿಎಸೈ ಐ.ಆರ್.ಗಡ್ಡೇಕರ್ ಅವರು ಸಮಾಜದಲ್ಲಿ ಶಾಂತಿ ಕಾಪಾಡಿಕೊಂಡು ಬರುವುದೇ ಪೊಲೀಸ್ ಇಲಾಖೆಯ ಪ್ರಮುಖ ಕರ್ತವ್ಯ. ಪೊಲೀಸ್ ಇಲಾಖೆ ಜನಸ್ನೇಹಿ ಇಲಾಖೆಯಾಗಬೇಕೆಂದು ಬೀಟ್ ಪೊಲೀಸ್ ವ್ಯವಸ್ಥೆ, ಜನಸಂಪರ್ಕ ಸಭೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಯಾವುದೇ ಸಮಸ್ಯೆಗಳಾದಾಗ ಪೊಲೀಸ್ ಇಲಾಖೆಯ ಗಮನಕ್ಕೆ ತರುವುದು ಮತ್ತು ಇಲಾಖೆಯ ಸಹಕಾರವನ್ನು ಪಡೆಯುವುದು ನಾಗರಿಕರ ಕರ್ತವ್ಯವಾಗಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಪೊಲೀಸ್ ಇಲಾಖೆಯ ಜೊತೆ ನಾಗರಿಕರು ಕೈ ಜೋಡಿಸಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ಗೃಹರಕ್ಷಕ ದಳದ ಅಧಿಕಾರಿ ಧನಾಜಿ ಕಾಂಬಳೆ, ಸ್ಥಳೀಯರಾದ ನೆಲ್ಸನ್ ಬಾಬು, ಬೀಟ್ ಪೊಲೀಸ್ ಸಿಬ್ಬಂದಿಗಳಾದ ಸಂಜಯ್ ಮತ್ತು ಸುನೀಲ್ ಮೊದಲಾದವರು ಉಪಸ್ಥಿತರಿದ್ದರು.