ಖಲಿಸ್ತಾನಿ ಬೆಂಬಲಿಗರು ಕೆನಡಾದಲ್ಲಿ ಇಂದಿರಾ ಗಾಂಧಿ ಹತ್ಯೆಗೆ ಸಂಬಂಧಿಸಿದ ಸ್ತಬ್ಧಚಿತ್ರದ ಮೆರವಣಿಗೆ ನಡೆಸಿದರು. ಈ ಸ್ತಬ್ಧಚಿತ್ರದಲ್ಲಿ ಅಂಗರಕ್ಷಕರು ಇಂದಿರಾ ಗಾಂಧಿಗೆ ಗುಂಡು ಹಾರಿಸಿರುವಂತೆ , ಹಾಗೆಯೇ ಅವರು ರಕ್ತಸಿಕ್ತವಾಗಿ ಹತಾಷೆಯಲ್ಲಿ ಕೈಯನ್ನು ಮೇಲಕ್ಕೆತ್ತಿ ನಿಂತಿರುವಂತೆ ಚಿತ್ರಿಸಲಾಗಿದೆ. ಈ ಸ್ತಬ್ಧಚಿತ್ರಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಆದರೆ, ಇಂದಿರಾ ಗಾಂಧಿ ಅವರಿಗೆ ಸಂಬಂಧಿಸಿದ ಈ ರೀತಿಯ ವಿಡಿಯೋ ಕುರಿತು ಕೆನಡಾದಿಂದ ಯಾವುದೇ ಪ್ರತಿಕ್ರಿಯೆ ಇನ್ನೂ ನೀಡಿಲ್ಲ.
ಆಪರೇಷನ್ ಬ್ಲೂ ಸ್ಟಾರ್‌ನ 39 ನೇ ವರ್ಷಾಚರಣೆಗೆ 4 ದಿನ ಬಾಕಿ ಇರುವಾಗ ಖಲಿಸ್ತಾನಿ ಬೆಂಬಲಿಗರು ಇಂದಿರಾ ಗಾಂಧಿಯವರ ಸ್ತಬ್ದಚಿತ್ರ ಪ್ರದರ್ಶನ ನಡೆಸಿದರು. ತೆರೆದ ಟ್ರಕ್‌ನಲ್ಲಿ, ಅವರು ರಕ್ತಸಿಕ್ತ ಬಟ್ಟೆಯನ್ನು ಧರಿಸಿದ್ದ ಇಂದಿರಾ ಗಾಂಧಿಯವರ ಪ್ರತಿಕೃತಿಯನ್ನು ಇರಿಸಿದ್ದರು. ಹಾಗೆಯೇ ಇಬ್ಬರು ಅಂಗರಕ್ಷಕರಂತೆ ಕಾಣುವ ಇಬ್ಬರ ಕೈಯಲ್ಲಿ ಬಂದೂಕು ಇರಿಸಿ ನಿಲ್ಲಿಸಿದ್ದರು. ಈ ವಿಡಿಯೋವನ್ನು ಕಾಂಗ್ರೆಸ್ ನಾಯಕ ಮಿಲಿಂದ್ ದಿಯೋರಾ ಕೂಡ ಶೇರ್ ಮಾಡಿದ್ದಾರೆ.
ಈ ವಿಡಿಯೋವನ್ನು ಹಂಚಿಕೊಂಡಿರುವ ಮಿಲಿಂದ್ ದಿಯೋರಾ, ಇಂದಿರಾ ಗಾಂಧಿಯವರ ಹತ್ಯೆಯನ್ನು ಬಿಂಬಿಸುವ ಕೆನಡಾದ ಬ್ರಾಂಪ್ಟನ್ ನಗರದಲ್ಲಿ ನಡೆದ 5 ಕಿ.ಮೀ ಉದ್ದದ ಪರೇಡ್ ಅನ್ನು ನೋಡಿ ಭಾರತೀಯನಾಗಿ ನಾನು ಆಘಾತಕ್ಕೊಳಗಾಗಿದ್ದೇನೆ. ಇದು ಯಾರ ಪರವಾಗಿಯೂ ನಿಲ್ಲುವ ವಿಚಾರವಲ್ಲ. ಇದು ಒಂದು ದೇಶಕ್ಕೆ ಗೌರವ ಮತ್ತು ಅದರ ಪ್ರಧಾನ ಮಂತ್ರಿಯ ಹತ್ಯೆಯಿಂದ ಉಂಟಾದ ನೋವಿನ ಕುರಿತು ಆಲೋಚಿಸಬೇಕು, ನಾವು ಒಗ್ಗಟ್ಟಾಗಿ ಪ್ರತಿಕ್ರಿಯೆ ನೀಡಬೇಕು, ಇದು ಸಂಪೂರ್ಣ ಖಂಡನೀಯ ಎಂದು ಹೇಳಿದ್ದಾರೆ.
ಲಂಡನ್‌ನಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನ ಖಲಿಸ್ತಾನಿಗಳು ವಿದೇಶದಲ್ಲಿ ಭಾರತದ ಗೌರವವನ್ನು ಅವಮಾನಿಸಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಲಂಡನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಅಳವಡಿಸಲಾಗಿದ್ದ ತ್ರಿವರ್ಣ ಧ್ವಜವನ್ನು ಖಲಿಸ್ತಾನಿಗಳು ಕಿತ್ತೆಸೆದಿದ್ದರು. ಈ ಬಗ್ಗೆಯೂ ಸಾಕಷ್ಟು ಗದ್ದಲ ನಡೆದಿತ್ತು. ಈ ಸಂಪೂರ್ಣ ವಿಷಯವು ಭಾರತದಲ್ಲಿ ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಬಂಧನದ ನಂತರ ಖಲಿಸ್ತಾನಿ ಬೆಂಬಲಿಗರ ಅಟ್ಟಹಾಸ ಹೆಚ್ಚಾಗಿದೆ.