ಟ್ವಿಟ್ಟರ್ ‘ಬ್ಲೂ ಟಿಕ್’ ಪಡೆಯಲು ಬೆಲೆ ಪರಿಷ್ಕರಣೆ: ಎಲಾನ್ ಮಸ್ಕ್ ಅಧಿಕೃತ ಘೋಷಣೆ

ವಾಷಿಂಗ್ಟನ್: ಟ್ವಿಟ್ಟರ್ ಸಂಸ್ಥೆಯ ಮಾಲಿಕ ಎಲಾನ್ ಮಸ್ಕ್ ಬ್ಲೂ ಟಿಕ್‌ಗಾಗಿ ತಿಂಗಳಿಗೆ 8 ಡಾಲರ್ ಪಾವತಿಸಬೇಕಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ. ಟ್ವಿಟರ್​ನಲ್ಲಿ ಅಧಿಕೃತ ಖಾತೆಗಳನ್ನು ಗುರುತಿಸಲು ನೆರವಾಗುವ ಬ್ಲೂಟಿಕ್ಗೆ ಬಳಕೆದಾರರು ಸ್ವತಃ ಶುಲ್ಕ ತೆರಲು ಆರಂಭಿಸಿದರೆ ಜಾಹೀರಾತಿನ ಮೇಲೆ ಅವಲಂಬನೆ ಕಡಿಮೆಯಾಗುತ್ತದೆ ಎಂದು ಮಸ್ಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಎಲಾನ್ ಮಸ್ಕ್ ಬ್ಲೂಟಿಕ್ ಕುರಿತು ಟ್ವೀಟ್ ಮಾಡಿ ಪರಿಷ್ಕರಣೆಯ ಸುದ್ದಿಯನ್ನು ಖಚಿತಪಡಿಸಿದ್ದರು. ಜೊತೆಗೆ ಹೊಸ ಟ್ವಿಟರ್ ಬ್ಲೂ ಚಂದಾದಾರಿಕೆಗಾಗಿ 19.99 ಡಾಲರ್ ಶುಲ್ಕ ವಿಧಿಸಲಾಗುತ್ತದೆ ಎಂದು ವರದಿಯಾಗಿತ್ತು. ಇದೀಗ ಈ ವಿಚಾರದ ಕುರಿತು ಸ್ವತಃ ಮಸ್ಕ್ ಸ್ಪಷ್ಟನೆ ನೀಡಿದ್ದು, 8 ಡಾಲರ್ ಪಾವತಿಸಿ ಬ್ಲೂ ಟಿಕ್ ಪಡೆದುಕೊಳ್ಳಬಹುದು ಎಂದಿದ್ದಾರೆ. ಜೊತೆಗೆ ಆಯಾ ದೇಶದಲ್ಲಿ ಬೆಲೆಯನ್ನು ಸರಿಹೊಂದಿಸಲಾಗುತ್ತದೆ ಎಂದು ಮಸ್ಕ್ ಹೇಳಿದ್ದಾರೆ.