‘ಇನ್ವೆಸ್ಟ್ ಕರ್ನಾಟಕ’ ಸಮಾವೇಶಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

ಬೆಂಗಳೂರು: ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಚಾಲನೆ ಸಿಕ್ಕಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ದೀಪಬೆಳಗುವ ಮೂಲಕ ಸಮಾವೇಶವನ್ನು ಉದ್ಘಾಟನೆಗೊಳಿಸಿದರು. ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಸಮಾವೇಶ ಉದ್ದೇಶಿಸಿ ಮಾತನಾಡಿದರು.

ಹೂಡಿಕೆದಾರರ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕರ್ನಾಟಕದಲ್ಲಿ ಸಂಸ್ಕೃತಿಯ ಜೊತೆ ತಂತ್ರಜ್ಞಾನವೂ ಇದೆ. ಕರ್ನಾಟಕ ಇಡೀ ಜಗತ್ತನ್ನೇ ಸೆಳೆದ ರಾಜ್ಯವಾಗಿದೆ. ಜೊತೆಗೆ ರಾಜ್ಯದಲ್ಲಿ ಉತ್ಪಾದನೆಯ ಪ್ರಮಾಣವೂ ಹೆಚ್ಚಾಗಿದೆ. ಮೆಟ್ರೋ ರೈಲಿನ ವಿಸ್ತರಣೆಯೂ ಆಗಿದೆ ಎಂದು ಹೇಳಿದರು.

ದೇಶದ ಅರ್ಥ ವ್ಯವಸ್ಥೆ ಈಗ ಉತ್ತಮವಾಗಿ ಸುಧಾರಣೆಯಾಗುತ್ತಿದೆ. ಅರ್ಥ ವ್ಯವಸ್ಥೆಯ ಸುಧಾರಣೆಗಾಗಿ ಸರ್ಕಾರವೂ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಪರಿಣಾಮವಾಗಿ ಭಾರತದ ಶಕ್ತಿ ಇಡೀ ವಿಶ್ವಕ್ಕೆ ಗೊತ್ತಾಗಿದೆ. ಕೋವಿಡೋತ್ತರ ಕಾಲಘಟ್ಟದಲ್ಲಿ ಭಾರತದ ಆರ್ಥಿಕತೆ ಮುಂಚೂಣಿಯಲ್ಲಿದೆ. ದೇಶದ ಆರ್ಥಿಕತೆಯಲ್ಲಿ ಕರ್ನಾಟಕದ ಕೊಡುಗೆಯೂ ಸಾಕಷ್ಟಿದೆ ಎಂದು ಮೋದಿ ಹೇಳಿದರು.

ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರವಿದ್ದು, ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ರಾಜ್ಯವಾಗಿದೆ. ಈ ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರವೂ ಉತ್ತಮವಾಗಿ ಸಾಥ್ ನೀಡುತ್ತಿದೆ ಎಂದು ಮೋದಿ ಹೇಳಿದರು. ಕರ್ನಾಟಕವು ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿಯ ಹೊಸ ಪಥದಲ್ಲಿ ಹೆಜ್ಜೆ ಹಾಕುತ್ತಿದೆ. ಅಭಿವೃದ್ಧಿಯ ವಿಚಾರದಲ್ಲಿ ಕರ್ನಾಟಕದಷ್ಟು ಮುಂಚೂಣಿಯಲ್ಲಿ ಸಾಗುತ್ತಿರುವ ಬೇರೆ ರಾಜ್ಯವಿಲ್ಲ.