ದಾಂಡೇಲಿ :ಹಳೆದಾಂಡೇಲಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯ ಜೀವ ಉಳಿಸಿದ ಪೊಲೀಸರು : ಪೊಲೀಸರ ಸಮಯಪ್ರಜ್ಞೆಗೆ ವ್ಯಾಪಕ ಮೆಚ್ಚುಗೆ

ದಾಂಡೇಲಿ : ಯಾವುದೊ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ನೇಣಿಗೆ ಕೊರಳೊಡ್ಡಿ, ಅಂಗಾತ ಬಿದ್ದು, ಜೀವನ್ಮರಣ ಹೋರಾಟದಲ್ಲಿದ್ದ ಮಹಿಳೆಯೊಬ್ಬಳನ್ನು ರಕ್ಷಿಸಿದ ಘಟನೆ ದಾಂಡೇಲಿ ನಗರದ ಹಳೆದಾಂಡೇಲಿಯಲ್ಲಿ ನಡೆದಿರುವುದರ ಬಗ್ಗೆ ಇಂದು ಬುಧವಾರ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.

ಘಟನೆಯ ವಿವರ ಹೀಗಿದೆ: ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಬಂದಂ ಅವರಿಗೆ ಹಳೆದಾಂಡೇಲಿಯಿಂದ ಅನಾಮಧೇಯ ಮೊಬೈಲ್ ಕರೆ ಬಂದಿತ್ತು. ಆ ಕರೆಯಲ್ಲಿ ನೊಂದ ಮಹಿಳೆಯೊಬ್ಬಳು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಮಕ್ಕಳನ್ನು ನೀವು ಕರೆದುಕೊಂಡು ಹೋಗಿ ಎಂಬ ಮನವಿ ಮಾಡಿದ್ದಳು. ನೀವು ಯಾರು?, ಎಲ್ಲಿಂದ ಕರೆ ಮಾಡುತ್ತಿದ್ದೀರಿ?, ನಿಮ್ಮ ಹೆಸರೇನು ಎಂದು ಕೇಳಿದಾಗ? ಹೆಸರನ್ನು ಹೇಳದ ಆ ಮಹಿಳೆ ಹಳೆದಾಂಡೇಲಿಯಿಂದ ಕರೆ ಮಾಡುತ್ತಿದ್ದೇನೆಂದಷ್ಟೆ ಹೇಳಿ ಪೋನ್ ಕರೆ ಸ್ಥಗಿತಗೊಳಿಸಿದ್ದಳು. ತಕ್ಷಣವೆ ರೇಣುಕಾ ಬಂದಂ ಅವರು ದಾಂಡೇಲಿ ನಗರ ಪೊಲೀಸ್ ಠಾಣೆಯ ಪಿಎಸೈ ಐ.ಆರ್.ಗಡ್ಡೇಕರ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಕೂಡಲೆ ಪಿಎಸೈ ಐ.ಆರ್.ಗಡ್ಡೇಕರ್ ಅವರು ಠಾಣೆಯ ಪೊಲೀಸ್ ಸಿಬ್ಬಂದಿಗಳಾದ ಮಂಜುನಾಥ ದೇಮಟ್ಟಿ ಮತ್ತು ಸಿದ್ರಾಮ ರಾಮರಥ ಅವರನ್ನು ಹಳೆದಾಂಡೇಲಿಗೆ ಕಳುಹಿಸಿಕೊಟ್ಟಿದ್ದಾರೆ. ಹಳೆದಾಂಡೇಲಿಯಲ್ಲಿ ಎಲ್ಲೆಡೆ ಸುತ್ತಾಡಿ, ಒಂದು ಮನೆಯ ಹತ್ತಿರ ಬಂದಾಗ ಎರಡು ಪುಟ್ಟ ಮಕ್ಕಳು ಅಮ್ಮ ಸತ್ರು ಎಂದು ಅಳುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೆ ಮಂಜುನಾಥ್ ದೇಮಟ್ಟಿ ಮತ್ತು ಸಿದ್ರಾಮ ರಾಮರಥ ಅವರು ಆ ಮನೆಯೊಳಗಡೆ ಹೋಗಿ ನೋಡಿದಾಗ ಮಹಿಳೆಯೊಬ್ಬಳು ನೇಣಿಗೆ ಯತ್ನಿಸಿ, ದಾರ ತುಂಡಾಗಿ ಕೆಳಗಡೆ ಬಿದ್ದು, ನರಳಾಡುತ್ತಿರುವುದು ಕಂಡು ಬಂದಿದೆ. ಬಾಯಿಂದ ಜೊಲ್ಲು ಬರುತ್ತಿದ್ದು, ಜೀವನ್ಮರಣ ಹೋರಾಟದಲ್ಲಿದ್ದ ಮಹಿಳೆಯ ಮುಖಕ್ಕೆ ನೀರು ಸಿಂಪಡಿಸಿ, ತಕ್ಷಣವೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಪೊಲೀಸರು ಬರುವುದು ಸ್ವಲ್ಪ ವಿಳಂಭವಾಗಿರುತ್ತಿದ್ದರೂ ಮಹಿಳೆ ಸಾವನ್ನಪ್ಪುತ್ತಿದ್ದಳು, ಪರಿಣಾಮವಾಗಿ ಎರಡು ಪುಟ್ಟ ಮಕ್ಕಳು ಅನಾಥವಾಗುತ್ತಿದ್ದವು.

ನೇಣಿಗೆ ಯತ್ನಿಸಿದ್ದ ಮಹಿಳೆ ರೇಣುಕಾ ಬಂದಂ ಅವರಿಗೆ ಕರೆ ಮಾಡಿದ್ದು, ರೇಣುಕಾ ಬಂದಂ ಅವರು ಪಿಎಸೈಯವರಿಗೆ ಮಾಹಿತಿ ರವಾನಿದ್ದು, ಪಿಎಸೈಯವರು ಪೊಲೀಸ್ ಸಿಬ್ಬಂದಿಗಳನ್ನು ತಕ್ಷಣವೆ ಕಳುಹಿಸಿಕೊಟ್ಟಿದ್ದು, ಆ ಪೊಲೀಸ್ ಸಿಬ್ಬಂದಿಗಳು ತಮ್ಮ ಸಹೋದರಿಯೆ ಎಂಬ ಭಾವನೆಯಿಂದ ತಡವರಿಯದ ಸ್ಪಂದಿಸಿದ ಪರಿಣಾಮವಾಗಿ ಚಿರನಿದ್ರೆಗೆ ಜಾರಬೇಕಾದ ಮಹಿಳೆಯೊಬ್ಬಳು ಮತ್ತೇ ಬದುಕುಳಿಯುವಂತಾಗಿದೆ. ಇದು ಆಕೆಯ ಎರಡು ಮಕ್ಕಳ ಪುಣ್ಯ ಎಂದೇ ಹೇಳಲಾಗುತ್ತಿದ್ದರೂ, ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಕೆ ನಗರದೆಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಪೊಲೀಸರ ಕಾರ್ಯಕ್ಕೆ ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಬಿ.ಎಸ್.ಲೋಕಾಪುರ ಮತ್ತು ಪಿಎಸೈಗಳಾದ ಐ.ಆರ್.ಗಡ್ಡೇಕರ್ ಹಾಗೂ ಪಿ.ಬಿ.ಕೊಣ್ಣೂರು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.