ಬಾಲಿವುಡ್ನ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರು ಹಲವು ವರ್ಷಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಅವರಿಗೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಪ್ರತಿ ಭಾನುವಾರ ಅಮಿತಾಭ್ ಬಚ್ಚನ್ ಅವರನ್ನು ನೋಡಲು ಅವರ ಮನೆ ಮುಂದೆ ನೂರಾರು ಅಭಿಮಾನಿಗಳು ಜಮಾಯಿಸುತ್ತಾರೆ. ಮನೆ ಹೊರಗೆ ಬರುವ ಬಿಗ್ ಬಿ ಅವರು ಎಲ್ಲರ ಕಡೆಗೆ ಕೈ ಬೀಸುತ್ತಾರೆ. ಮೊದಲಿನಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ವಿಶೇಷ ಏನೆಂದರೆ, ಅಭಿಮಾನಿಗಳನ್ನು ಭೇಟಿ ಮಾಡುವಾಗ ಅಮಿತಾಭ್ ಬಚ್ಚನ್ ಅವರು ಚಪ್ಪಲಿ ಹಾಕಿಕೊಳ್ಳುವುದಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಈಗ ಅವರು ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಅಮಿತಾಭ್ ಬಚ್ಚನ್ ಸಕ್ರಿಯರಾಗಿದ್ದಾರೆ. ತಮ್ಮ ದಿನಚರಿಯ ಬಗ್ಗೆ, ಅನುಭವದ ಬಗ್ಗೆ, ಹೊಸ ಸಿನಿಮಾಗಳ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಅವರು ಅಭಿಮಾನಿಗಳಿಗೆ ತಿಳಿಸುತ್ತಾರೆ. ತಮ್ಮ ಆಲೋಚನೆಗಳನ್ನು ಕೂಡ ಅದರಲ್ಲಿ ಹಂಚಿಕೊಳ್ಳುತ್ತಾರೆ. ತಾವು ಫ್ಯಾನ್ಸ್ ಮೀಟ್ ಮಾಡುವಾಗ ಯಾಕೆ ಚಪ್ಪಲಿ ಧರಿಸುವುದಿಲ್ಲ ಎಂಬುದನ್ನು ಅವರೀಗ ವಿವರಿಸಿದ್ದಾರೆ. ಈ ಬಗ್ಗೆ ಅವರು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
‘ಅಭಿಮಾನಿಗಳನ್ನು ಭೇಟಿ ಮಾಡುವಾಗ ಯಾರಾದರೂ ಬರಿಗಾಲಿನಲ್ಲಿ ಹೋಗುತ್ತಾರಾ ಅಂತ ಕೆಲವರು ನನ್ನ ಬಳಿ ವಾದ ಮಾಡುತ್ತಾರೆ. ನಾನು ಬರಿಗಾಲಿನಲ್ಲೇ ಹೋಗುತ್ತೇನೆ. ನೀವು ದೇವಸ್ಥಾನಕ್ಕೆ ಹೋಗುವಾಗ ಚಪ್ಪಲಿ ಹಾಕಿಕೊಳ್ಳುವುದಿಲ್ಲ. ಭಾನುವಾರ ಬರುವ ನನ್ನ ಹಿತೈಷಿಗಳೆಲ್ಲರೂ ನನ್ನ ಪಾಲಿಗೆ ದೇವಸ್ಥಾನ ಇದ್ದಹಾಗೆ’ ಎಂದು ಅಮಿತಾಭ್ ಬಚ್ಚನ್ ಅವರು ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳಿಗೆ ಅವರು ನೀಡಿದ ಈ ಪರಿ ಗೌರವ ಕಂಡು ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್ಕುಮಾರ್ ಕೂಡ ಅಭಿಮಾನಿಗಳನ್ನು ದೇವರು ಎಂದಿದ್ದರು. ಅಮಿತಾಭ್ ಬಚ್ಚನ್ ಅವರ ಮನದಲ್ಲೂ ಫ್ಯಾನ್ಸ್ ಬಗ್ಗೆ ಅದೇ ಭಾವನೆ ಇದೆ.
ಅಮಿತಾಭ್ ಬಚ್ಚನ್ ಅವರು ಬ್ಲಾಗ್ ಮೂಲಕ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅದೇ ರೀತಿ ತಮ್ಮ ಹೆಲ್ಮೆಟ್ ವಿವಾದದ ಬಗ್ಗೆ ಇತ್ತೀಚೆಗೆ ಸ್ಪಷ್ಟನೆ ನೀಡಿದ್ದರು. ‘ಅದು ಭಾನುವಾರ. ಚಿತ್ರೀಕರಣಕ್ಕೆ ಸೂಕ್ತ ಅನುಮತಿಯನ್ನು ತೆಗೆದುಕೊಳ್ಳಲಾಗಿತ್ತು. ಎಲ್ಲಾ ಕಚೇರಿಗಳು ಮುಚ್ಚಿರುವುದರಿಂದ ಮತ್ತು ಸಾರ್ವಜನಿಕರ ಓಡಾಟ ಮತ್ತು ಟ್ರಾಫಿಕ್ ಇಲ್ಲದ ಕಾರಣ ಭಾನುವಾರ ಅನುಮತಿ ಕೋರಲಾಯಿತು. ಚಿತ್ರೀಕರಣಕ್ಕಾಗಿ ರಸ್ತೆಯ ಒಂದು ಭಾಗವನ್ನು ಪೊಲೀಸರು ನಿರ್ಬಂಧಿಸಿದ್ದರು. ಆ ದಾರಿ ಇರುವುದು 30ರಿಂದ 40 ಮೀಟರ್ ಮಾತ್ರ. ನಾನು ಧರಿಸಿದ್ದ ಆ ಡ್ರೆಸ್ ಸಿನಿಮಾದ ಕಾಸ್ಟ್ಯೂಮ್. ಬೈಕ್ ಹತ್ತಿ ಹಿಂಬದಿಯಲ್ಲಿ ಕುಳಿತ ರೀತಿಯಲ್ಲಿ ನಾನು ನಟಿಸಿದೆ. ಸವಾರಿ ಮಾಡಲಿಲ್ಲ. ನನ್ನ ಬಗ್ಗೆ ಕಾಳಜಿ ತೋರಿಸಿದ್ದಕ್ಕಾಗಿ ಧನ್ಯವಾದಗಳು’ ಎಂದು ಅಮಿತಾಭ್ ಬಚ್ಚನ್ ಬರೆದುಕೊಂಡಿದ್ದರು.