ಅಂಕೋಲಾ: ತಾಲೂಕಿನ ಗೋಖಲೆ ಸೆಂಟನರಿ ಕಾಲೇಜಿನ ಹೊರ ಆವರಣದಲ್ಲಿ ಬೆಳೆಗಾರರ ಸಮಿತಿಯ ಸಂಘಟನೆಯಲ್ಲಿ ಎರಡನೇ ವರ್ಷದ ಮಾವು ಮೇಳ ಮಂಗಳವಾರ ನಡೆಯಿತು.
ಜಿ . ಸಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಸಿದ್ದಲಿಂಗ ಸ್ವಾಮಿ ವಸ್ತ್ರದ ಮೇಳಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಅಂಕೋಲಾ ತಾಲೂಕಿನ ರೈತರು ಚಿಕ್ಕ ಹಿಡುವಳಿ ಹೊಂದಿದ್ದಾರೆ. ಇಲ್ಲಿನ ಪರಿಸರಕ್ಕೆ ತಕ್ಕಂತೆ ಅಧಿಕ ಇಳುವರಿ ನೀಡುವ ಮಾವಿನ ಗಿಡಗಳನ್ನು ಬೆಳೆಸಲು ಆದ್ಯತೆ ನೀಡಬೇಕು. ಮಾವಿನ ವಿವಿಧ ಉತ್ಪನ್ನಗಳ ಕುರಿತು ರೈತರು ಆಸಕ್ತಿ ವಹಿಸಬೇಕು ಎಂದರು.
ಬೆಳೆಗಾರರ ಸಮಿತಿ ಅಧ್ಯಕ್ಷ ನಾಗರಾಜ ನಾಯಕ ಮಾತನಾಡಿ, ಮಾವು ಮೇಳದ ರೂಪು ರೇಷೆಗಳನ್ನು ವಿವರಿಸಿ ಮುಂದಿನ ವರ್ಷ ಬೃಹತ್ ಮಾವು ಮೇಳ ಆಯೋಜಿಸಲು ಚಿಂತನೆ ನಡೆದಿದೆ ಎಂದರು.
ಚಿಂತಕ ಮಹಾಂತೇಶ ರೇವಡಿ, ಸಾಹಿತಿ ವಿಠ್ಠಲ ಗಾಂವಕರ, ವಕೀಲ ಉಮೇಶ ನಾಯ್ಕ, ಬೆಳೆಗಾರರ ಸಮಿತಿ ಗೌರವಾಧ್ಯಕ್ಷರಾದ ಹನುಮಂತ ಗೌಡ, ಭಾಸ್ಕರ ನಾರ್ವೇಕರ ಸಾಂಧರ್ಭಿಕವಾಗಿ ಮಾತನಾಡಿದರು.
ಮಾವು ಕೃಷಿಕ ರಾಮಾ ಸೋಮು ಆಗೇರ, ಮಾವಿನ ಗಿಡಗಳ ಮಾರಾಟಗಾರ ಹರೀಶ ರಾಮಚಂದ್ರ ನಾಯಕ ಮತ್ತು ಮಾವು ಹಣ್ಣು ಮಾರಾಟ ಮಾಡುವ ಹಿರಿಯ ಮಹಿಳೆ ಸೋಮಿ ಗೌಡ ಬೆಳಂಬಾರ, ಮೂಲೆಮನೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬೆಳೆಗಾರರ ಸಮಿತಿ ಗೌರವಾಧ್ಯಕ್ಷ ದೇವರಾಯ ನಾಯಕ ಸಭಾಧ್ಯಕ್ಷತೆ ವಹಿಸಿದ್ದರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ.ಪಿ.ಸತೀಶ, ತೋಟಗಾರಿಕೆ ಮಹಾವಿದ್ಯಾಲಯದ ಉಪನ್ಯಾಸಕ ಚಂದನ್ ಇದ್ದರು.
ಸಮಿತಿ ಕಾರ್ಯದರ್ಶಿ ರಾಮಚಂದ್ರ ಹೆಗಡೆ ನಿರೂಪಿಸಿದರು. ಶಿವಾನಂದ ನಾಯಕ ಪ್ರಾರ್ಥಿಸಿದರು.
ಮುಂಜಾನೆ ತುರುಸಿನಿಂದ ಮಾವು ಮಾರಾಟ ನಡೆಯಿತು. ಸೋಮವಾರ ಸಂಜೆ ಮಳೆಯಾದ ಕಾರಣ ಹಾಗೂ ಪಟ್ಟಣದ ಹೊರ ಆವರಣದಲ್ಲಿ ಮಾವು ಮೇಳ ನಡೆದ ಪರಿಣಾಮ ಕಳೆದ ವರ್ಷಕ್ಕಿಂತ ಈ ಬಾರಿ ಮಾರಾಟ ಕಡಿಮೆಯಾಗಿತ್ತು. ಬಂದವರೆಲ್ಲಾ ಫೋಟೋ ಕ್ಲಿಕ್ಕಿಸಿಕೊಂಡು ಹೋಗುತ್ತಾರೆ, ಕೆಲವರು ದರ ಕೇಳಿ ಖರೀದಿ ಮಾಡದೆ ಹಾಗೆಯೇ ತೆರಳುತ್ತಾರೆ. ಹಾಗಾಗಿ ವ್ಯಾಪಾರ ಕಡಿಮೆ ಇದೆ ಎಂದು ಮಾರಾಟಕ್ಕೆ ಬಂದಿದ್ದ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದರು. ಮಾವು ಮೇಳದಲ್ಲಿ ವಿವಿಧ ತಳಿಯ ಮಾವುಗಳು, ಮಾವಿನ ಉತ್ಪನ್ನ, ಮಾವಿನ ಗಿಡಗಳ ಮಾರಾಟ ಮತ್ತು ಪ್ರದರ್ಶನ ನಡೆಯಿತು.