ದಾಂಡೇಲಿ :ದಾಂಡೇಲಿಯಲ್ಲಿ ಲೇಖಕ ಎನ್.ಜಯಚಂದ್ರನ್ ಅವರ ಹಸಿರುಡುಗೆಯ ಮಿಂಚು ಕೃತಿ ಬಿಡುಗಡೆ

ದಾಂಡೇಲಿ : ದಾಂಡೇಲಿಯಲ್ಲಿ ಲೇಖಕ ಎನ್.ಜಯಚಂದ್ರನ್ ಅವರ ಹಸಿರುಡುಗೆಯ ಮಿಂಚು ಕೃತಿ ಬಿಡುಗಡೆಕೃತಿಯ ಬಿಡುಗಡೆ ಸಮಾರಂಭವು ನಗರ ಸಮೀಪದ ಕೋಗಿಲಬನದಲ್ಲಿರುವ ವೈಶ್ಯವಾಣಿ ಸಮಾಜಭವನದಲ್ಲಿ ಜರುಗಿತು.

ಕಾರ್ಯಕ್ರಮವನ್ನು ನಾಡಿನ ಹಿರಿಯ ತಬಲಾ ವಾದಕರಾದ ಉಸ್ತಾದ್.ಕೆ.ಎಲ್.ಜಮಾದಾರ್ ಅವರು ಉದ್ಘಾಟಿಸಿ ಮಾತನಾಡಿದ ನಮ್ಮಲ್ಲಿ ಸಾಧಿಸಬೇಕೆನ್ನುವ ಛಲವಿರಬೇಕು. ಅಂತಹ ಛಲವಿದ್ದಾಗ ಇಂತಹ ಕೃತಿಗಳು ಹೊರಬರಲು ಸಾಧ್ಯ ಎಂದರಲ್ಲದೆ, ನನ್ನ ಸಾಧನೆಗೆ ಪ್ರರಣಾಶಕ್ತಿಯಾಗಿ ಕ್ಷೇತ್ರದ ದಾಂಡೇಲಪ್ಪನ ಆಶೀರ್ವಾದದ ಜೊತೆಗೆ ದಾಂಡೇಲಿಗರ ಪ್ರೋತ್ಸಾಹವು ಅತೀ ಮುಖ್ಯವಾಗಿದೆ. ಸರ್ವಧರ್ಮ ಸಮನ್ವಯತೆಯ ದಾಂಡೇಲಿಯಲ್ಲಿದ್ದುಕೊಂಡು ಜೀವನದಲ್ಲಿ ಸಾರ್ಥಕತೆಯನ್ನು ಪಡೆದ ಧನ್ಯತೆ ನನಗಿದೆ ಎಂದರಲ್ಲದೆ, ಸಾಹಿತ್ಯ ಕೃಷಿಯಲ್ಲಿ ಎನ್.ಜಯಚಂದ್ರನ್ ಅವರು ಮತ್ತಷ್ಟು ಸಾಧನೆ ಮಾಡುವಂತಾಗಲೆಂದು ಶುಭವನ್ನು ಹಾರೈಸಿದರು.

ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಭಾಷಾ ಸಲಹಾ ಮಂಡಳಿಯ ಸದಸ್ಯರಾದ ಚೆನ್ನಪ್ಪ ಅಂಗಡಿಯವರು ಇಲ್ಲಿಯ ಪ್ರಕೃತಿಗೆ ಅನುಗುಣವಾಗಿಯೆ ಈ ಹಸಿರುಡುಗೆಯ ಮಿಂಚು ಇಂದು ಅನಾವರಣಗೊಂಡಿದೆ. ಎನ್.ಜಯಚಂದ್ರನ್ ಅವರು ಅನೇಕ ವರ್ಷಗಳಿಂದ ತನ್ನ ಹರಿತವಾದ ಬರವಣಿಗೆಯ ಮೂಲಕ ಸಮಾಜಕ್ಕೆ ಧ್ವನಿಯಾಗಿದ್ದವರು. ಅವರ ಬರವಣಿಗೆಯ ಶೈಲಿಯಲ್ಲಿ ಸಮಾಜವನ್ನು ಪರಿವರ್ತಿಸುವ ತಾಕತ್ತಿರುವುದರ ಜೊತೆಗೆ ಇನ್ನೊಬ್ಬರಿಗೆ ಬರವಣಿಗೆಗೆ ಪ್ರೇರೆಪಿಸುವಂತಿದೆ. ಸಮಾಜದ ಬಗ್ಗೆ ಕಾಳಜಿಯನ್ನಿಟ್ಟುಕೊಂಡವನಿಂದ ಸದೃಢ ಸಮಾಜ ನಿರ್ಮಾಣಕ್ಕೆ ಪೂರಕವಾಗುವ ಕೃತಿಗಳು ಹೊರಬರಲು ಸಾಧ್ಯ. ಆ ನಿಟ್ಟಿನಲ್ಲಿ ಎನ್.ಜಯಚಂದ್ರನ್ ಅವರ ಈವರೆಗಿನ ಎಲ್ಲಾ ಕೃತಿಗಳಲ್ಲಿ ಅದನ್ನು ಗಮನಿಸಬಹುದು. ಎನ್.ಜಯಚಂದ್ರನ್ ಅವರ ಬರವಣಿಗೆಯಲ್ಲಿ ಸೂಕ್ಷ್ಮತೆಯಿದೆ, ಸಾಮಾಜಿಕವಾದ ಕಾಳಜಿ ಮತ್ತು ಬದ್ಧತೆಯಿದೆ. ಈ ಕೃತಿಯನ್ನು ಬಿಡುಗಡೆ ಮಾಡಲು ಅತ್ಯಂತ ಅಭಿಮಾನವೆನಿಸುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಪತ್ರಕರ್ತ ಹಾಗೂ ಹಣತೆ ಕಾರವಾರ ತಾಲೂಕು ಘಟಕದ ಅಧ್ಯಕ್ಷರಾದ ನಾಗರಾಜ ಹರಪನಳ್ಳಿಯವರು ಮಾತನಾಡಿ ಎನ್.ಜಯಚಂದ್ರನ್ ಅವರು ನೇರ ನಡೆ ನುಡಿಯ ವ್ಯಕ್ತಿತ್ವವನ್ನು ಹೊಂದಿದವರು. ಹಾಗಾಗಿ ಅವರ ಬರವಣಿಗೆಯಲ್ಲಿ ಅದೇ ದಿಟ್ಟತನವಿದೆ, ಎದೆಗಾರಿಕೆಯಿದೆ, ಸಾಮಾಜಿಕ ಮೌಲ್ಯಗಳಿವೆ ಎಂದರು.

ಕೃತಿಕಾರರಾದ ಎನ್.ಜಯಚಂದ್ರನ್ ಅವರು ಮಾತನಾಡಿ ಹಣತೆ ಸಂಘಟನೆಯಡಿ ನನ್ನ ಕೃತಿಯನ್ನು ಬಿಡುಗಡೆಗೊಳಿಸುತ್ತಿರುವುದು ಅತ್ಯಂತ ಅಭಿಮಾನ ಮತ್ತು ಸಂತಸ ತಂದಿದೆ. ನಾನು ಬೆಳೆದ ಊರಿನಲ್ಲಿ, ನನ್ನವರ ಜೊತೆ ಕೃತಿ ಅನಾವರಣಗೊಂಡಿರುವುದು ಸದಾ ಸ್ಮರಣೀಯವಾಗಲಿದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹಣತೆ ಸಂಘಟನೆಯ ಜಿಲ್ಲಾಧ್ಯಕ್ಷರಾದ ಅರವಿಂದ ಕರ್ಕಿಕೋಡಿಯವರು ಎನ್.ಜಯಚಂದ್ರನ್ ಅವರು ನಮ್ಮ ಹಣತೆ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎನ್ನುವುದಕ್ಕಿಂತಲೂ ಅವರು ಸಂಘಟನೆಯ ಪ್ರಧಾನವಾದ ಶಕ್ತಿ ಎಂದರು. ಮಾತು ಕಡಿಮೆ, ಮೌನದಲ್ಲಿದ್ದುಕೊಂಡೆ ಸಾಹಿತ್ಯ ಗೀಳನ್ನು ಮೈಗೂಡಿಸಿಕೊಂಡ ಪ್ರಬುದ್ಧ ಬರಹಗಾರ ಎನ್.ಜಯಚಂದ್ರನ್ ಅವರಾಗಿದ್ದಾರೆ. ಹಸಿರುಡುಗೆಯ ಮಿಂಚು ಕೃತಿ ಎನ್.ಜಯಚಂದ್ರನ್ ಅವರಿಗೆ ಮತ್ತಷ್ಟು ಕೃತಿ ರಚನೆಗೆ ಸ್ಪೂರ್ತಿಯಾಗಲೆಂದರು.

ವೇದಿಕೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯ್ತು ಅಧ್ಯಕ್ಷ ಅಶೋಕ್ ನಾಯ್ಕ, ಗ್ರಾ,ಪಂ ಸದಸ್ಯ ರಮೇಶ ನಾಯ್ಕ, ಹಣತೆ ಹಳಿಯಾಳ ತಾಲೂಕು ಘಟಕದ ಅಧ್ಯಕ್ಷರಾದ ರಾಮಕೃಷ್ಣ ಗುನಗ ಉಪಸ್ಥಿತರಿದ್ದರು.

ಹಣತೆ ದಾಂಡೇಲಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಆರ್.ವಿ.ಗಡೆಪ್ಪನವರ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಹಣತೆ ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯರಾದ ಉಪೇಂದ್ರ ಘೋರ್ಪಡೆಯವರು ಕೃತಿ ಪರಿಚಯ ಮಾಡಿದರು. ಸೋಮಶೇಖರ್ ಅಂಧಕಾರ ಅವರು ವಂದಿಸಿದರು. ಎ.ಆರ್.ರೆಹಮಾನ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ನಗರದ ಅಭಿಷೇಕ್ ಡ್ಯಾನ್ಸ್ ಅಕಾಡೆಮಿಯವರಿಂದ ನೃತ್ಯ ವೈಭವ ಜರುಗಿತು.

ಬೈಟ್ : ಚೆನ್ನಪ್ಪ ಅಂಗಡಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಭಾಷಾ ಸಲಹಾ ಮಂಡಳಿಯ ಸದಸ್ಯರು.

ಬೈಟ್ : ಉಸ್ತಾದ್ ಕೆ.ಎಲ್.ಜಮಾದಾರ, ಖ್ಯಾತ ತಬಲಾ ವಾದಕರು, ದಾಂಡೇಲಿ