ಜೋಯಿಡಾ ತಹಶೀಲ್ದಾರ್ ಕಚೇರಿಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ಆರೋಗ್ಯ ತಪಾಸಣಾ ಶಿಬಿರ

ಜೋಯಿಡಾ : ತಾಲ್ಲೂಕು ಕೇಂದ್ರದಲ್ಲಿರುವ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಇಂದು ಗುರುವಾರ ಆಯೋಜಿಸಲಾಗಿದ್ದ ಆರೋಗ್ಯ ತಪಾಸಣಾ ಶಿಬಿರವು ಯಶಸ್ವಿಯಾಗಿ ಸಂಪನ್ನಗೊಂಡಿತು.

ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಹಶೀಲ್ದಾರ್ ಜುಬಿನ್ ಮಹಾಪಾತ್ರ ಅವರು ಈ ರಾಷ್ಟ್ರದ ಆರ್ಥಿಕತೆಯಲ್ಲಿ ಪ್ರತಿಯೊಬ್ಬರ ಆರೋಗ್ಯ ಸಂರಕ್ಷಣೆ ಬಹು ಮುಖ್ಯ. ಸಮೃದ್ಧ ಆರೋಗ್ಯವಂತ ಸಮಾಜದಿಂದ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ. ತಹಶೀಲ್ದಾರ್ ಕಚೇರಿಯಲ್ಲಿ ಸದಾ ಕೆಲಸದ ಒತ್ತಡದಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಆರೋಗ್ಯದ ರಕ್ಷಣೆಗಾಗಿ ಈ ಶಿಬಿರವನ್ನು ಆಯೋಜಿಸಲಾಗಿದೆ. ನಾನು ಆರೋಗ್ಯವಾಗಿದ್ದರೆ ನಮ್ಮವರು ನೆಮ್ಮದಿಯಿಂದ ಇರುತ್ತಾರೆ ಎನ್ನುವುದನ್ನು ಪ್ರತಿಯೊಬ್ಬರು ಅರಿತು ನಡೆದುಕೊಳ್ಳಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಗ್ರೇಡ್ 2 ತಹಶೀಲ್ದಾರ್ ರಾಜೇಶ್ ಚೌವ್ಹಾಣ್ ಅವರು ನಾವು ಜೀವನದಲ್ಲಿ ಏನೇ ಸಾಧನೆ ಮಾಡಬೇಕಾದರೂ ಅದಕ್ಕೆ ಸ್ಪೂರ್ತಿಯ ರೂಪದಲ್ಲಿ ನಮ್ಮ ಸದೃಢ ಆರೋಗ್ಯ ಅತಿ ಮುಖ್ಯ. ನಾವು ನಮ್ಮ ಕೆಲಸದ ಒತ್ತಡದ ನಡುವೆಯೂ ನಮ್ಮ ಆರೋಗ್ಯ ಸಂರಕ್ಷಣೆಯ ಕಡೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಕರೆ ನೀಡಿದರು.

ಉಪ ತಹಶೀಲ್ದಾರ್ ಸಂಜೀವ್ ಭಜಂತ್ರಿಯವರು ಮಾತನಾಡಿ, ಆರೋಗ್ಯ ಸುರಕ್ಷತೆಯ ಕಡೆಗೆ ಹೆಚ್ಚಿನ ಗಮನವನ್ನು ನೀಡಬೇಕು. ಪ್ರತಿಯೊಬ್ಬರು ಆರೋಗ್ಯ ನಿಯಮಾವಳಿಗಳನ್ನು ಚಾಚು ತಪ್ಪದೇ ಪಾಲಿಸಿದಾಗ ಸದಾ ಆರೋಗ್ಯವಂತರಾಗಿ ಇರಲು ಸಾಧ್ಯ. ಈ ನಿಟ್ಟಿನಲ್ಲಿ ಈ ಶಿಬಿರ ನಮಗೆಲ್ಲರಿಗೂ ಪ್ರೇರಣೆಯಾಗಲಿ ಎಂದರು.

ಉಪ ತಹಶೀಲ್ದಾರ್ ಸುರೇಶ್ ವಕ್ಕುಂದ ಅವರು ಮಾತನಾಡಿ ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಡುವೆ ಉತ್ತಮವಾದ ಬಾಂಧವ್ಯವನ್ನು ಇಟ್ಟುಕೊಳ್ಳಲು ಈ ಶಿಬಿರ ಸಹಕಾರಿ ಎಂದರು.

ಈ ಶಿಬಿರದಲ್ಲಿ ಆರೋಗ್ಯ ಸೇವೆಯನ್ನು ನೀಡಿದ ವೈದ್ಯರುಗಳಿಗೆ ಮತ್ತು ಸಿಬ್ಬಂದಿಗಳಿಗೆ ತಾಲೂಕ ಆಡಳಿತದ ವತಿಯಿಂದ ತಹಶೀಲ್ದಾರ್ ಜುಬಿನ್ ಮಹಾಪಾತ್ರ ಅವರು ಕೃತಜ್ಞತಾ ಪತ್ರವನ್ನು ವಿತರಿಸಿದರು.

ಶಿಬಿರದಲ್ಲಿ ತಹಶೀಲ್ದಾರ್ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ತಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಂಡರು.

ಕಂದಾಯ ನಿರೀಕ್ಷಕರುಗಳಾದ ಗಣಪತಿ ಮೇತ್ರಿಯವರು ಸ್ವಾಗತಿಸಿದ ಕಾರ್ಯಕ್ರಮಕ್ಕೆ ಶ್ಯಾಮ್ ಸುಂದರ ಅವರು ವಂದಿಸಿದರು. ವೆಂಕಟೇಶ್ ಕೆಳಗಿನಮನೆ ಕಾರ್ಯಕ್ರಮವನ್ನು ನಿರೂಪಿಸಿದರು