ಜೋಯಿಡಾ : ಏಕಲ್ ಅಭಿಯಾನ, ಬೆಳಗಾವಿ ಮತ್ತು ಆರೋಗ್ಯ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಜೋಯಿಡಾ ತಾಲ್ಲೂಕಿನ ರಾಮನಗರದಲ್ಲಿ ಉಚಿತ ಸೇವಾ ಕ್ಲಿನಿಕ್ ಉದ್ಘಾಟನೆಯು ಇಂದು ಗುರುವಾರ ಜರುಗಿತು.
ಉಚಿತ ಸೇವಾ ಕ್ಲಿನಿಕನ್ನು ಉದ್ಘಾಟಿಸಿ ಮಾತನಾಡಿದ ಆರೋಗ್ಯ ಸೇವಾ ಸಂಸ್ಥೆಯ ಡಾ. ದಯಾಪ್ರಸಾದ ಅವರು ಆರೋಗ್ಯ ರಕ್ಷಣೆಯಲ್ಲಿ ವೈದ್ಯರು ಮತ್ತು ಆಸ್ಪತ್ರೆಗಿಂತಲೂ ನಮ್ಮ ಪ್ರತಿಯೊಬ್ಬರ ದಿನಚರಿ ಮತ್ತು ಜವಾಬ್ದಾರಿಯೇ ಮುಖ್ಯವಾಗಿದೆ. ನಮ್ಮ ನಮ್ಮ ಆರೋಗ್ಯದ ರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಿದೆ. ಎಲ್ಲದಕ್ಕೂ ಆರೋಗ್ಯವೇ ಮೂಲ. ಸಮೃದ್ಧ ಆರೋಗ್ಯದಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದರು.
ಆರೋಗ್ಯದ ಬಗ್ಗೆ ನಿಷ್ಕಾಳಜಿ ವಹಿಸುವ ಪ್ರತಿಯೊಬ್ಬರು, ವೈದ್ಯರು ಮತ್ತು ಆಸ್ಪತ್ರೆಗಳ ಮೇಲೆಯೇ ಅವಲಂಬಿತರಾಗಿದ್ದಾರೆ. ಅದರಿಂದಾಗಿ ಅವರು ತಮ್ಮ ಜೀವನದುದ್ದಕ್ಕೂ ಗಳಿಸಿದ ಆಸ್ತಿ ಮತ್ತು ಸುಖವನ್ನು ಕಳೆದುಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಆರೋಗ್ಯ ಜಾಗೃತಿ ಅತಿ ಅವಶ್ಯ ಎಂದರು.
ಈ ಸಂದರ್ಭದಲ್ಲಿ ಜೋಯಿಡಾ ಸಾಮಾಜಿಕ ಹೋರಾಟಗಾರ ರವಿ ರೇಡ್ಕರ್, ಡಾ. ರಾಯುಡು, ಡಾ. ಎ. ಜಿ. ಕುಲಕರ್ಣಿ, ಸಮಾಜ ಸೇವಕ ಗಣೇಶ ಶೆಣೈ, ಮೊದಲಾದವರು ಸಂದರ್ಭೋಚಿತವಾಗಿ ಮಾತನಾಡಿ ನೂತನ ಉಚಿತ ಸೇವಾ ಕ್ಲಿನಿಕ್ ರಾಮನಗರದ ಜನತೆಯ ಆರೋಗ್ಯ ಸಮೃದ್ಧಿಯನ್ನು ದಯಪಾಲಿಸುವ ದೇಗುಲವಾಗಲಿ ಎಂದು ಶುಭವನ್ನು ಹಾರೈಸಿದರು.
ಏಕಲ್ ಅಭಿಯಾನ ಪ್ರಮುಖರಾದ ಗಿರೀಶ ಪೈ, ಡಾ. ವೈಶಾಲಿ ಕಿತ್ತೂರ, ನ್ಯಾಯವಾದಿ ಸುನೀಲ್ ದೇಸಾಯಿ, ರವಿ, ಸಂಜಯ ಹರಚಿರಕರ್, ಶ್ರೀಕಾಂತ ಕುಮಟಾ, ಸಂಭಾಜಿ ಗವಾಳಕರ, ಮಧುಸೂದನ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.