ಕ.ಸಾ.ಪ. ದಿಂದ ಜಿ.ಎಚ್. ನಾಯಕರ ಸಂಸ್ಮರಣೆ * ಸಿದ್ದಾಪುರ: ಬರೆಯುವವರು ಬಹಳ ಜನ.ಆದರೆ ಬರೆದಂತೆ ಬದುಕು ಸಾಗಿಸುವವರು ತೀರ ವಿರಳ. ಎಂತಹ ಪರಿಸ್ಥಿತಿಯಲ್ಲೂ ರಾಜಿ ಮಾಡಿಕೊಳ್ಳದೇ ಬರೆದಂತೆ ಬದುಕಿದವರು ಪ್ರೊ. ಜಿ.ಎಚ್. ನಾಯಕರಾಗಿದ್ದರು ಎಂದು ಸಿದ್ದಾಪುರ ತಾಲೂಕಿನ 6 ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಆರ್.ಕೆ. ಹೊನ್ನೆಗುಂಡಿ ಹೇಳಿದರು ಅವರು ಪಟ್ಟಣದ ತಾ.ಪಂ. ಆವರಣದ ಕಸಾಪ ಕಚೇರಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕಳೆದ ಶುಕ್ರವಾರ ನಿಧನರಾದ ಸಾಹಿತಿ ಪ್ರೊ.ಜಿ.ಎಚ್. ನಾಯಕ ಅವರಿಗೆ ಶೃದ್ದಾಂಜಲಿ ಸಲ್ಲಿಸಿ ಮಾತನಾಡಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ತಮ್ಮಣ್ಣ ಬೀಗಾರ, ಜಿ.ಜಿ. ಹೆಗಡೆ ಬಾಳಗೋಡ, ಶಿವಾನಂದ ಹೊನ್ನೆಗುಂಡಿ, ಪ್ರಾಂಶುಪಾಲ ಎಮ್.ಕೆ. ನಾಯ್ಕ ಹೊಸಳ್ಳಿ , ತಾ.ಪಂ. ವ್ಯವಸ್ಥಾಪಕ ನಾಗರಾಜ ಜೋಕನಾಳ, ಕಮಲಾಕರ ಭಂಡಾರಿ, ಪ್ರಶಾಂತ ಶೇಟ್ ಮುಂತಾದವರು ನುಡಿನಮನ ಸಲ್ಲಿಸಿದರು. ಜಿ.ಎಚ್. ನಾಯಕ ಅವರ ವಿದ್ಯಾರ್ಥಿ ಚಂದ್ರಶೇಖರ ಕುಂಬ್ರಿಗದ್ದೆ ಮಾತನಾಡಿ ಜಿ.ಎಚ್. ನಾಯಕರ ನೇರ, ನಿಷ್ಠುರವಾದಗಳಿಂದ ಅವರಿಗೆ ಅನೇಕ ದೊಡ್ಡ ದೊಡ್ಡ ಅವಕಾಶಗಳು ಕೈತಪ್ಪಿದವು. ಯಾವುದನ್ನೂ ಬೇಡಿ ಪಡೆಯುವುದು ಅವರಿಗೆ ಇಷ್ಟವಿರಲಿಲ್ಲ ಎಂದು ತಮ್ಮ ಅನುಭವ ಹಂಚಿಕೊಂಡರು. ಕಸಾಪ ತಾಲೂಕು ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ಅಧ್ಯಕ್ಷತೆ ವಹಿಸಿ ಜಿ.ಎಚ್. ನಾಯಕ ರಂತಹ ವಿಮರ್ಶಕರು ತೀರ ವಿರಳ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದರು. ಕಸಾಪ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ಸ್ವಾಗತಿಸಿದರು. ಕೋಶಾಧ್ಯಕ್ಷ ಪಿ.ಬಿ. ಹೊಸೂರು ವಂದಿಸಿದರು.