ಅಂಕೋಲಾ: ವೈಭವದಿಂದ ನಡೆದ ಕ್ಲಾಸಿಯೋ ಸಂಘ ಹಾಗೂ ನಾಟ್ಯ ರಾಣಿ ಕಲಾ ಕೇಂದ್ರದ ವಾರ್ಷೀಕೋತ್ಸವ

ಅಂಕೋಲಾ : ತಾಲೂಕಿನ ಜೈಹಿಂದ ರಂಗಮಂಟಪದಲ್ಲಿ ಶೈಕ್ಷಣಿಕ, ಸಾಹಿತ್ಯಿಕ, ಕಲೆ, ಕ್ರೀಡಾ ಮತ್ತು ಸಾಂಸ್ಕೃತಿಕ ಹಿತೋತ್ಸಾಹಿ ಸಂಘ ಹಾಗೂ ನಾಟ್ಯರಾಣಿ ಕಲಾ ಕೇಂದ್ರದ ವಾರ್ಷಿಕೋತ್ಸವ, ಗುರುವಂದನೆ ಹಾಗೂ ಭರತನಾಟ್ಯ ವೈಭವ ಕಾರ್ಯಕ್ರಮ ವಿದ್ಯುಕ್ತವಾಗಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪುರಸಭೆಯ ಮಾಜಿ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಮಾತನಾಡಿ ನಮ್ಮ ಸಂಸ್ಕ್ರತಿ ಪರಂಪರೆಯನ್ನು ಗಟ್ಟಿಗೊಳಿಸಲು ಹಾಗೂ ಪ್ರತಿಭೆಗಳನ್ನು ಬೆಳೆಸಲು ಕ್ಲಾಸಿಯೋ ಸಂಘ ಸಮಾಜಮುಖಿಯಾಗಿ ನಿಂತು ಗಮನ ಸೆಳೆಯುತ್ತಿರುವದು ಮಾದರಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮಿ ಪಾಟೀಲ ಮಾತನಾಡಿ ಇಂದಿನ ದಿನಮಾನಗಳಲ್ಲಿ ಮಕ್ಕಳನ್ನು ಕೇವಲ ಅಂಕಗಳಿಕೆಯ ಓಟದಲ್ಲಿ ನಿಲ್ಲಿಸುತ್ತಿರುವ ಸಂದರ್ಭಗಳಲ್ಲಿ ಪಾಲಕರು ಕಲೆ ಮತ್ತು ನಾಟ್ಯಗಳಲ್ಲಿಯೂ ಸಹ ಅವರನ್ನು ತೊಡಗಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಅಂಕೋಲಾ ಅರ್ಬನ ಬ್ಯಾಂಕಿನ ಅಧ್ಯಕ್ಷ ಭಾಸ್ಕರ ನಾರ್ವೇಕರ ಮಾತನಾಡಿ ಕ್ರೀಯಾಶೀಲ ವ್ಯಕ್ತಿತ್ಬದ ಮುಖ್ಯಾಧ್ಯಾಪಕ ಪ್ರಭಾಕರ ಬಂಟ ಅವರು ಕ್ಲಾಸಿಯೋ ಸಂಘದ ಜೊತೆಗೆ ವಿವಿಧ ಸಾಮಾಜಿಕ ರಂಗದ ಭೂಮಿಕೆಯಲ್ಲಿ ಕೊಡುಗೆ ನೀಡುತ್ತಿರುವದು ಮಾದರಿ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ, ಅಂಕೋಲಾ ನಗರದ ಸರಕಾರಿ ಪ್ರೌಡ ಶಾಲೆಯ ಮುಖ್ಯಾಧ್ಯಾಪಕ ಭಾಸ್ಕರ ಗಾಂವಕರ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಪ್ರಗತಿ ಆಪ್ಟಿಕಲ್ಸ್ ನ ಮಾಲಕ ವಿನಾಯಕ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ಲಾಸಿಓ ಸಂಘದ ಅಧ್ಯಕ್ಷ ಪ್ರಭಾಕರ ಬಂಟ ಸ್ವಾಗತಿಸಿದರು.
ಶಾರದಾ ಸಂಗಡಿಗರು ಪ್ರಾರ್ಥಿಸಿದರು. ನೃತ್ಯ ಶಿಕ್ಷಕಿ ನಾಗವೇಣಿ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರು, ಸಂಘದ ಸಂಚಾಲಕರು ಆದ ಅನುರಾಧಾ ಶಾನಭಾಗ ಕಾರ್ಯಕ್ರಮ ನಿರೂಪಿದರು. ಶಿಕ್ಷಕ ಪ್ರಶಾಂತ ನಾಯ್ಕ ವಂದಿಸಿದರು.

ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಸಾಧನೆಗೈದ ಭರತನಾಟ್ಯ ವಿದ್ಯಾರ್ಥಿಗಳಿಗೆ ಹಾಗೂ ಸಂಚಾಲಕಿ ಅನುರಾಧಾ ಶಾನಭಾಗ ಹಾಗೂ ನೃತ್ಯ ಶಿಕ್ಷಕಿ ನಾಗವೇಣಿ ಹೆಗಡೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.