ದಾಂಡೇಲಿ :ಕತ್ತಲಿನಿಂದ ಬೆಳಕಿನೆಡೆಗೆ ದಾಂಡೇಲಿಯ ಇಂದಿರಾ ಕ್ಯಾಂಟೀನ್

ದಾಂಡೇಲಿ : ಮೊನ್ನೆ ಏ:28 ರಿಂದ ಕರೆಂಟ್ ಇಲ್ಲದೆ ಕತ್ತಲೆಯಲ್ಲಿಯೆ ಸೇವೆ ನೀಡುತ್ತಿದ್ದ ನಗರದ ಇಂದಿರಾ ಕ್ಯಾಂಟೀನಿಗೆ ಕೊನೆಗೂ ಮತ್ತೇ ಇಂದು ಶುಕ್ರವಾರ ಸಂಜೆಯಿಂದ ವಿದ್ಯುತ್ ಪೊರೈಕೆ ಆರಂಭವಾಗಿ, ಕತ್ತಲಿನಿಂದ ಬೆಳಕಿನೆಡೆಗೆ ಇಂದಿರಾ ಕ್ಯಾಂಟೀನ್ ಪರಿವರ್ತನೆಗೊಂಡಿದೆ.

ವಿದ್ಯುತ್ ಬಿಲ್ ಪಾವತಿಸದೇ ಇದ್ದ ಹಿನ್ನಲೆಯಲ್ಲಿ ಹೆಸ್ಕಾಂ ನವರು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರು. ಇದರಿಂದ ಉಪಹಾರ, ಊಟ ತಯಾರಿಸಲು ಇಂದಿರಾ ಕ್ಯಾಂಟೀನಿನ ಸಿಬ್ಬಂದಿಗಳು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

ಇಂದು ಶುಕ್ರವಾರ ನಗರ ಸಭೆಯ ಪೌರಾಯುಕ್ತರ ಮಾರ್ಗದರ್ಶನದಲ್ಲಿ ನಗರ ಸಭೆಯ ಪರಿಸರ ಅಭಿಯಂತರರಾದ ಶುಭಂ, ಆರೋಗ್ಯ ನಿರೀಕ್ಷಕ ವಿಲಾಸ್ ದೇವಕರ್, ನಗರ ಸಭೆಯ ವಿದ್ಯುತ್ ವಿಭಾಗದ ಸಲೀಂ ಅವರು ಭೇಟಿ ನೀಡಿ ಇಂದಿರಾ ಕ್ಯಾಂಟೀನಿನ ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಿ, ಬಾಕಿಯಿರುವ ವಿದ್ಯುತ್ ಬಿಲ್ಲನ್ನು ಆನ್ಲೈನ್ ಮೂಲಕ ಕಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಂದಿರಾ ಕ್ಯಾಂಟೀನಿನ ಗುತ್ತಿಗೆದಾರನಿಗೆ ಪೋನಾಯಿಸಿ ಪೌರಾಯುಕ್ತರಾದ ಆರ್.ಎಸ್.ಪವಾರ್ ಸೂಕ್ತ ಎಚ್ಚರಿಕೆಯನ್ನು ನೀಡಿದ್ದಾರೆ. ಪರಿಣಾಮವಾಗಿ ಇಂದು ಸಂಜೆ 6 ಗಂಟೆಗೆ ವಿದ್ಯುತ್ ಪೊರೈಕೆಯ ಸೇವೆ ಆರಂಭಗೊಂಡಿದೆ. ಇದರಿಂದ ವಿದ್ಯುತ್ ಇಲ್ಲದೆ ಒದ್ದಾಡುತ್ತಿದ್ದ ಇಂದಿರಾ ಕ್ಯಾಂಟೀನಿನ ಸಿಬ್ಬಂದಿಗಳಿಗೆ ಇದೀಗ ತುಸು ನೆಮ್ಮದಿ ದೊರೆತಂತಾಗಿದೆ.