ಕಲಬುರಗಿಯಲ್ಲಿ ಬಿಸಿಲ ಬೆಂಕಿಗೆ ಜನರು ತತ್ತರ..!

ಕಲಬುರಗಿ(ಮೇ.18):  ಕಳೆದ 4 ದಿನದಿಂದ ಕಲಬುರಗಿ ಕಾದ ಕಾವಲಿಯಂತಾಗಿದೆ. ಸೂರ್ಯ ಬೆಳಗ್ಗೆ 6 ಗಂಟೆಯಿಂದಲೇ ಬೆಂಕಿ ಬಿಸಿಲು ಸೂಸುತ್ತ ಜನ- ಜಾನುವಾರು ಕಂಗಾಲಾಗಿಸಿದ್ದಾನೆ. ಹೀಗಾಗಿ ಬಿಸಿಲ ಪ್ರಖರತೆ ಹೆಚ್ಚುತ್ತಲೇ ಹೊರಟಿದೆ. ಬೆಂಕಿಯಂತ ಬಿಸಿಲಿಗೆ ಜನ ಬಸವಳಿದು ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ಸೋಮವಾರ ಗರಿಷ್ಠ 41, ಕನಿಷ್ಠ 25.6 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಮಂಗಳವಾರವೂ ಹೆಚ್ಚುಕಮ್ಮಿ ಇದೇ ಅಳತೆಯಲ್ಲೇ ತಾಪಮಾನ ಸಾಗಿದೆ. ಬುಧವಾರ ಇನ್ನೂ ಹಚ್ಚುವ ಸಂಭವಗಳು ಗೋಚರಿಸಿದೆ. ಪ್ರಸಕ್ತ ವರ್ಷ ಅತಿ ಹೆಚ್ಚು ತಾಪಮಾನ 41 ಡಿಸೆ ದಾಖಲಾದ ದಿನ ಇದಾಗಿದೆ.

ಹಗಲು ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣಕ್ಕೆ ರಾತ್ರಿ ಧಗೆಯೂ ಹೆಚ್ಚಾಗುತ್ತಿದ್ದು, ಧಗೆಯ ಕಾರಣಕ್ಕೆ ಜನ ಮನೆ ಮಾಳಿಗೆಯಲ್ಲಿ ಮಲಗುತ್ತಿರುವುದು ಸಾಮಾನ್ಯವಾಗಿದೆ. ಧಗೆಯ ಕಾರಣಕ್ಕೆ ಮನೆ ಮಾಳಿಗೆ ಮೇಲೆ ಮಲಗಿದ್ದ ಸಮಯ ಸಾಧಿಸಿ ಕಳ್ಳರು ಮನೆ ಕಳವು ಮಾಡಿದಂತಹ ಪ್ರಕರಣಗಳು ನಗರದ ಅಲ್ಲಲ್ಲಿ ನಡೆದಿರುವುದು ಬೆಳಕಿಗೆ ಬಂದಿರುವುದರಿಂದ ಜನ ಮನೆಗೆ ಬೀಗ ಹಾಕಿ ಮನೆ ಮಾಳಿಗೆ ಮೇಲೆ ಮಲಗಲೂ ಸಹ ಭಯ, ಆತಂಕ ಪಡುವಂತಾಗಿದೆ.

ಸೂರ್ಯೋದಯವಾಗುತ್ತಿದ್ದಂತೆಯೇ ತಣ್ಣಗೆ ಏರುವ ಬಿಸಿಲ ತಾಪ ಮಧ್ಯಾಹ್ನದ ವೇಳೆಗೆ ಹೆಚ್ಚುತ್ತ ಹೋಗಿ ಭೂಮಿ ಕಾದ ಕೆಂಡವಾದಂತಾಗುತ್ತಿದೆ. ಸಾಯಂಕಾಲ ಆರು ಗಂಟೆಯವರೆಗೂ ಬಿಸಿಲ ತಾಪ ಹೆಚ್ಚಾಗಿಯೇ ಇರುವುದರಿಂದ ಈ ಅವಧಿಯಲ್ಲಿ ಜನ ಹೊರಗಡೆ ಓಡಾಡಲು ಹೆದರುವಂತಾಗಿದೆ. ಜಿಲ್ಲೆಯಲ್ಲಿ ಇನ್ನೂ ಎರಡ್ಮೂರು ದಿನ ಬಿಸಿಲಿನ ತಾಪ ಇದೇ ರೀತಿ ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.