ಈ ಹಿಂದೆ ಕೇರಳದ ಉರಗಪ್ರಿಯ ಸುರೇಶ ಹಾವಿಗೆ ಮುತ್ತು ಕೊಟ್ಟ ವಿಡಿಯೋ ನೋಡಿದ ನೆನಪಿರಬಹುದು. ಇದೀಗ ನಿಕ್ ಎಂಬಾತ ಕೆರೆದಂಡೆಯ ಮೇಲೆ ಕುಳಿತು ಕಾಳಿಂಗ ಸರ್ಪದ ತಲೆಗೆ ಮುತ್ತಿಟ್ಟು ಸುದ್ದಿಯಲ್ಲಿದ್ದಾನೆ. ದೂರದಿಂದ ಹಾವನ್ನು ಕಂಡರೆ ಅಥವಾ ನೆನಪಿಸಿಕೊಂಡರೆ ಬೆಚ್ಚಿಬೀಳುವ ಅನೇಕರಿಗೆ ಈ ಮುತ್ತುಕೊಡುವ ಪರಿ ಕನಸಿನಲ್ಲಿಯೂ ಕಾಡಬಹುದೇ? ಈ ಕಾಳಿಂಗ ಸರ್ಪ ಬರೋಬ್ಬರಿ 12 ಅಡಿ ಉದ್ದ ಇದೆ. ನಿಧಾನವಾಗಿ ಚಲಿಸುವ ಅದನ್ನು ನಿಕ್ ಹಿಡಿಯುತ್ತಾನೆ. ಅದು ಹೆಡೆಯೆತ್ತಿ ನಿಲ್ಲುತ್ತದೆ. ಅದು ಅವನಿಗೆ ಬೆನ್ನು ಮಾಡಿದಾಗ ಮೆಲ್ಲಗೆ ಅವ ಅದರ ತಲೆಗೆ ಮುತ್ತನ್ನು ಕೊಡುತ್ತಾನೆ. ನೆಟ್ಟಿಗರು ಈ ವಿಡಿಯೋ ನೋಡಿ ಬೆಚ್ಚಿದ್ದಾರೆ. ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇಂಡಿಯಾನಾ ಜೋನ್ಸ್ ಸಿನೆಮಾದ ದೃಶ್ಯಗಳು ನೆನಪಾಗುತ್ತಿವೆ ಎಂದು ಕೆಲವರು ಹೇಳಿದ್ದಾರೆ. ಓಹ್ ಎಷ್ಟೊಂದು ನಿರಾಯಾಸವಾಗಿ ನೀವು ಚುಂಬಿಸಿದ್ದೀರಿ ಎಂದಿದ್ದಾರೆ ಮತ್ತೂ ಕೆಲವರು. ಇದೊಂದು ಝೆನ್ಸಮಯ! ಆಹಾ ಎಂದಿದ್ದಾರೆ ಒಬ್ಬರು. ವೈಯಕ್ತಿಕವಾಗಿ ನಿಮ್ಮ ಪರಿಚಯ ನನಗಿಲ್ಲ. ಆದರೆ ನೀವು ಈ ಸಮಯವನ್ನು ಬಹುವಾಗಿ ಆನಂದಿಸಿದ್ದೀರಿ ಮತ್ತು ಹೀಗೊಂದು ಯಶಸ್ವಿ ಚುಂಬನಕ್ಕೆ ಸಾಕಷ್ಟು ಕಷ್ಟಪಟ್ಟಿರುತ್ತೀರಿ. ಆದರೆ ನಿಮ್ಮ ಸುರಕ್ಷತೆಯ ಬಗ್ಗೆ ಗಮನವಿರಲಿ ಎಂದಿದ್ದಾರೆ ಒಬ್ಬರು.
ಹೀಗೆಲ್ಲ ಹುಚ್ಚು ಸಾಹಸಗಳನ್ನು ಮಾಡಿ ಸಾಧಿಸುವುದಾದರೂ ಏನಿದೆ? ಹೀಗೆಲ್ಲ ಪ್ರಾಣವನ್ನು ಪಣಕ್ಕಿಡಬೇಡಿ ಎಂದು ಕೆಲವರು ಬುದ್ಧಿ ಹೇಳಿದ್ದಾರೆ. ನೀವೇನು ಹೇಳುತ್ತೀರಿ?