ಲಕ್ನೋ: ಡಿಜೆ ಹಾಗೂ ರಸ್ತೆ ಲೈಟ್ ವಿಚಾರದಲ್ಲಿ ವಧುವಿನ ಕುಟುಂಬದವರೊಂದಿಗೆ ವಾದ, ವಿವಾದ ನಡೆದ ಹಿನ್ನೆಲೆಯಲ್ಲಿ ವರನೊಬ್ಬ ಮದುವೆಯನ್ನು ರದ್ದುಪಡಿಸಿದ ಘಟನೆ ಉತ್ತರ ಪ್ರದೇಶದ ಅಲಹಾಬಾದ್‍ನ ಬರಹುಲಾ ಗ್ರಾಮದಲ್ಲಿ ವರದಿಯಾಗಿದೆ.
ಮಿಜಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹಲಿಯಾ ಮೂಲದ ವರನಿಗೆ ಬರಹುಲಾದ ವಧುವನ್ನು ಮದುವೆಯಾಗಲು ನಿಶ್ಚಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವರನ ಕಡೆಯವರು ಬರಹುಲಾದ ವಧುವಿನ ಮನೆಗೆ ಮೆರವಣಿಗೆಯ ಮೂಲಕ ಬರುತ್ತಿದ್ದರು. ಆದರೆ ಈ ವೇಳೆ ಆರ್ಕೆಸ್ಟ್ರಾ ಕಲಾವಿದರು ತಡವಾಗಿ ಬಂದಿದ್ದಾರೆ. ಜೊತೆಗೆ ರಸ್ತೆ ದೀಪವು ಇರಲಿಲ್ಲ. ಇದರಿಂದಾಗಿ ವರ ಹಾಗೂ ವಧುವಿನ ಕಡೆಯವರ ನಡುವೆ ವಾಗ್ವಾದ ನಡೆದಿದೆ.
ಈ ವೇಳೆ ವರ ಮದುವೆಯನ್ನು ರದ್ದು ಪಡಿಸಿದ್ದಾನೆ. ಆದರೆ ಅಲ್ಲಿದ್ದ ಗ್ರಾಮಸ್ಥರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಅಷ್ಟರಾಗಲೇ ವರ ಹೊರಟು ಹೋಗಿದ್ದ. ಇದರಿಂದಾಗಿ ವಧುವಿನ ಕುಟುಂಬಸ್ಥರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಅಷ್ಟೇ ಅಲ್ಲದೇ ವರನಿಗೆ ವರದಕ್ಷಿಣೆ ಹಾಗೂ ಬೈಕ್ ನೀಡಲು ಜಮೀನನ್ನು ಅಡವಿಟ್ಟಿರುವುದಾಗಿ ವಧುವಿನ ಸಹೋದರ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ವರನ ತಂದೆಯನ್ನು ಕರೆಸಿದ್ದಾರೆ. ಈ ವೇಳೆ ವರನ ತಂದೆ ಕೂಡ ಪೊಲೀಸ್ ಠಾಣೆಗೆ ಬಂದು ತನ್ನ ಮಗ ವಧುವನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದಾರೆ.