ನೇಪಾಳ: ಯೇತಿ ಏರ್‌ಲೈನ್ಸ್‌ನ ಪ್ರಯಾಣಿಕ ವಿಮಾನ ಭಾನುವಾರ ಪೋಖರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ನದಿಯ ದಡದಲ್ಲಿ ಪತನಗೊಂಡಿದ್ದು, 68 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ 5 ಮಂದಿ ಭಾರತೀಯರು ಸೇರಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಒಟ್ಟು 68 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಗಳಿದ್ದ ಯೇತಿ ಏರ್‌ಲೈನ್ಸ್‌ನ 9N-ANC ATR-72 ವಿಮಾನ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 10:33 ಕ್ಕೆ ಟೇಕ್ ಆಫ್ ಆಗಿತ್ತು. ಪೋಖರಾ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ನದಿಯ ದಡದಲ್ಲಿ ವಿಮಾನ ಪತನಗೊಂಡಿದೆ. ಪ್ರಯಾಣಿಕರಲ್ಲಿ 15 ವಿದೇಶಿಗರು ಸೇರಿದ್ದಾರೆ. ವಿಮಾನ ಪತನಕ್ಕೀಡಾದ ಸ್ಥಳದಿಂದ ಕನಿಷ್ಠ 68 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೃತರಲ್ಲಿ ನಾಲ್ವರು ರಷ್ಯಾದ ಪ್ರಜೆಗಳು, ಇಬ್ಬರು ಕೊರಿಯನ್ ಹಾಗೂ ಆಸ್ಟ್ರೇಲಿಯಾ, ಐರಿಶ್, ಅರ್ಜೆಂಟೈನಾ, ಫ್ರೆಂಚ್ ನ ಒಬ್ಬರು ಸೇರಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ನೇಪಾಳದ ಸಚಿವ ಪುಷ್ಪ ಕಮಲ್ ದಹಾಲ್ ಅಪಘಾತದ ನಂತರ ಸಚಿವ ಸಂಪುಟದ ತುರ್ತು ಸಭೆಯನ್ನು ಕರೆದಿದ್ದಾರೆ. ಅಪಘಾತದ ಬಗ್ಗೆ ಅವರು ದುಃಖ ವ್ಯಕ್ತಪಡಿಸಿದ್ದು, ಗೃಹ ಸಚಿವಾಲಯ, ಭದ್ರತಾ ಸಿಬ್ಬಂದಿ ಮತ್ತು ಎಲ್ಲಾ ಸರ್ಕಾರಿ ಸಂಸ್ಥೆಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಕೈಗೊಳ್ಳುವಂತೆ ಸೂಚಿಸಿದ್ದಾರೆ.